Thursday 7 January 2016

ಬದುಕು ಹರಿವ ನದಿಯಂತೆ.....



ಮೊನ್ನೆಯಷ್ಟೇ ಗೆಳತಿಯೊಬ್ಬಳು ದಾರಿಯಲ್ಲಿ ಸಿಕ್ಕಿದ್ಲು. ತೀರಾ ಪರಿಚಯದ ಮುಖವೇನೂ ಅನಿಸಲಿಲ್ಲ. ಆದರೂ ಅದೇನೋ ಕುತೂಹಲ! ಎಲ್ಲಿಯೋ ನೋಡಿಂದಾಗಿದೇಯಲ್ಲಾ.. ನೋಡಿ ಸುಮಾರು ಹತ್ತು ವರ್ಷಗಳ ಮೇಲೆ ಆಗಿತ್ತು. ನೋಟಗಳು ಎದುರು ಬದುರು ಪುನಃ ಪುನಃ ದಿಟ್ಟಿಸಿದಾಗಲೇ ಅರಿವಿಗೇ ಬಂದದ್ದು. ಅವಳು ನನ್ನ ಪ್ರೈಮರಿ ಶಾಲೆಯ ಸಹಪಾಠಿ ಅಂಥ. ನಾನು ಮಾತನಾಡಿಸಲು ಮುಂದಾಗುವ ಹೊತ್ತಿಗೆ ಆಕೆಯೇ ಬಂದು ಮಾತನಾಡಿಸಿದಳು. ಹಾಯ್ ಹೇಗಿದಿಯಾ.. ನಾನು!
ನನಗೂ ಆಕೆಯ ಹೆಸರೇನೂ ನೆನಪಿರಲಿಲ್ಲ. ಮುಖಚರ್ಯೆ ಸ್ವಲ್ಪ ಪರಿಚಿತವೆನಿಸಿತ್ತಷ್ಟೇ. ಆಕೆ ಮಾತ್ರ ನನ್ನ ಹೆಸರು ನೆನಪಿಟ್ಟುಕೊಂಡಿದ್ದಳು. ಆದರೆ, ನಾನು ಹೆಸರಿನೊಂದಿಗೆ ಈಗ ಮುಂದುವರಿದ ಭಾಗವನ್ನು ಹೇಳಿ ಪರಿಚಯ ಮಾಡಿಕೊಂಡೆ. ಎಷ್ಟೆಲ್ಲಾ ಬದಲಾವಣೆ ತಂದಿಟ್ಟಿತ್ತು ಬದುಕು. ಬೌದ್ಧಿಕವಾಗಿ, ಆರ್ಥಿಕವಾಗಿ ಇಬ್ಬರೂ ತಂತಮ್ಮ ವ್ಯಾಪ್ತಿಯ ಇತಿ ಮಿತಿಯಲ್ಲಿ ಬೆಳೆದಿದ್ವಿ. ಆದರೂ, ಆ ಕ್ಷಣಕ್ಕೆ ಕೊಂಚ ಸ್ಟೇಟಸ್‍ಗಳ ಮಟ್ಟಿಗೆ ಮಾತು ಆರಂಭವಾದರೂ, ತದ ನಂತರದಲ್ಲಿ ಮಾತುಗಳು ಹೊರಳಿದ್ದು ನಮ್ಮ ಬಾಲ್ಯದೆಡೆಗೆ.. ನಮ್ಮ ಬಾಲ್ಯದ ದಿನಗಳ ಕಡೆಗೆ.. ಫಾರ್ಮಲಿಟಿ ಹೆಚ್ಚಿನ ಹೊತ್ತು ವರ್ಕ್‍ಔಟ್ ಆಗಲ್ಲ ಅನ್ನೋದಕ್ಕೆ ಇದೂ ಕೂಡ ಒಂದು ಉದಾಹರಣೆಯೇನೋ ದೇಹ ಅದೆಷ್ಟೇ ಬೆಳೆದಿದ್ದರೂ, ಮನಸ್ಸು ಗೆಳೆಯರ ಬಳಗಕ್ಕೆ ಸೇರಿಬಿಟ್ಟಾಗ ಮಗುವಂತೇ ಆಗಿಬಿಡುತ್ತೆ. ಅಲ್ಲಾಗಿದ್ದೂ ಅದೇ!
 ನಾವು ಓದಿದ್ದು, ಒಂದು ಖಾಸಗಿ ಶಾಲೆಯಲ್ಲಿ. ಪ್ರೈಮರಿ ಶಾಲೆಯ ಅವಧಿಯಲ್ಲಿ ಮಾಡಿದ್ದ ಕುಚೇಷ್ಟೆಗಳು, ಆಚರಣೆಗಳ ಕುರಿತಾಗಿ ಒಂದಿಷ್ಟು ಮಾತಿಗಿಳಿದೆವು. ನಾನು ಅದರ ನೆನಪಿನಲ್ಲೊಂದು ಹದಿನೈದು ವರ್ಷಗಳ ಹಿಂದಿನ ಗತಕಾಲದ ವೈಭವವನ್ನು ಮನದಲ್ಲಿಯೇ ಬಯೋಸ್ಕೋಪು ಹಾಕಿ ಓಡಿಸಲಾರಂಭಿಸಿದ್ದೆ. ಏನೇನೆಲ್ಲಾ ಇತ್ತು ಆ ದಿನಗಳಲ್ಲಿ. ಹಾಗಂದುಕೊಂಡರೆ ಏನೀರಲಿಲ್ಲ ಆ ಬದುಕಲ್ಲಿ. ಗೆಳೆಯರೊಟ್ಟಿಗೆ ಇರುತ್ತಿದ್ದ ಅಷ್ಟೂ ವರ್ಷಗಳು ಹೊಸ ವರ್ಷದ ದಿನದಷ್ಟೇ ಕಳೆಗಟ್ಟಿರುತ್ತಿದ್ದವು. ದಿನಾ ಒಂದಿಲ್ಲೊಂದು ನೆಪದಲ್ಲಿ ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ಸಿಹಿ ತಿಂಡಿ. ಅದೂ ಟೀಚರ್ ಕ್ಲಾಸಲ್ಲಿರುವಾಗ್ಲೇ ಕದ್ದು ತಿನ್ನುತ್ತಿದ್ದ ಮಜಾ. ಮಧ್ಯಾಹ್ನದ ಊಟದ ಹೊತ್ತಿಗೆ ಸಿಹಿ ತಂದವರಿಗೆ ಕಾಯುತ್ತಿದ್ದ ಖಾಲಿ ಡಬ್ಬಿ. ಆಗ ತಿಂದ ಅಷ್ಟೂ ಜನರ ಇಂತಿಷ್ಟು ಊಟದ ಪಾಲು. ಎಲ್ಲಾ ತಿಂದು ಭೂರಿ ಭೂಜನ ಸವಿದ ತೃಪ್ತಿ ಅವರಿಗಾದರೆ, ಸಿಹಿ ತಿಂದ ಖುಷಿ ನಮ್ಮದು. ಈ ಚೇಷ್ಟೆಗಳಿಗೆ ಒಂದು ಕಾಲಾವಧಿಯಲ್ಲಿ ದಿನವೂ ಸಿಹಿತಿಂಡಿ. ಮನೆಯಲ್ಲಿ ಸಾಕೆನಿಸುವಷ್ಟು ತಿಂದು, ಅದರ ಪರ್ಯಾಯವಾಗಿ ಎಲ್ಲರ ಮನೆಯ ಮಧ್ಯಾಹ್ನದ ತಿಂಡಿ ಸವಿಯಲು ಬಾಕ್ಸ್ ತರುತ್ತಿದ್ದದ್ದು ಒಂದು ಹವ್ಯಾಸವೇ ಆಗಿಹೋಯ್ತು.  ಸ್ಕೂಲ್‍ನಲ್ಲಿ ಪ್ರತಿ ವರ್ಷವೂ ಆಚರಿಸುತ್ತಿದ್ದ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆಗೆ ಆಯೋಜಿಸುತ್ತಿದ್ದ ಸರಸ್ವತಿ ಪೂಜೆ, ಶಾಲಾ ವಾರ್ಷಿಕೋತ್ಸವ ಮಾತ್ರವೇ ಅನುದಿನಕ್ಕೂ ನಮ್ಮಲ್ಲಿ ಹೊಸ ಉತ್ಸಾಹ, ಹುಮ್ಮಸ್ಸು ತರುತ್ತಿತ್ತು. ಮಾತ್ರವಲ್ಲ, ಬರುವ ವರ್ಷಕ್ಕೆ ನಾವು ಸೀನಿಯರ್‍ಗಳಾಗಿರ್ತೇವೆ ಎನ್ನುವ ಭಾವನೆಯೇ ಇನ್ನಿಲ್ಲದ ಬದುಕಿನೋತ್ಸಾಹವನ್ನು ಇಮ್ಮಡಿ ಮಾಡುತ್ತಿತ್ತು. ಅದಕ್ಕಾಗಿ ಒಂದಷ್ಟು ತಯಾರಿ ಮಾಡಿಕೊಳ್ಳಲು, ಟೀಚರ್ಸ್‍ಗಳ ನೆಚ್ಚಿನ ವಿದ್ಯಾರ್ಥಿ ಎನಿಸಿಕೊಳ್ಳಲು ನಾ ಮುಂದು ತಾ ಮುಂದು ಅಂಥ ಇನ್ನಿಲ್ಲದ  ಸಾಹಸಗಳಿಗೆ ಕೈಹಾಕುವುದು ನಮ್ಮ ವರ್ಷದ ರೆಸಲ್ಯೂಷನ್‍ಗಳಾಗಿರುತ್ತಿದ್ದವು. ಹೊಸ ವರ್ಷಾಚರಣೆಯ ಗುಂಗು ಅಚಾನಕ್ಕಾಗೂ ನಮ್ಮ ಗಮನಕ್ಕೆ ಸಿಗುತ್ತಿರಲಿಲ್ಲ. ತೀರಾ ಹೈಸ್ಕೂಲಿನ ಮಟ್ಟಿಗೆ ಬಂದಾಗ ಹ್ಯಾಪಿ ನ್ಯೂಇಯರ್ ಅನ್ನುತ್ತಿದ್ದದ್ದು ಬಿಟ್ಟರೇ, ಹೊಸ ವರ್ಷಕ್ಕೊಂದು ರೆಸಲ್ಯೂಷನ್ ಮಾಡ್ಕೊಬೇಕು. ಅದನ್ನ ಚಾಚುತಪ್ಪದ ಹಾಗೇ ಶಿರಸಾ ಪಾಲಿಸಬೇಕು ಎಂಬ ಯಾವ  ತತ್ವವೂ ನಮಗೆ ಗೊತ್ತಿರಲಿಲ್ಲ. ಎಳೆ ವಯಸ್ಸಿನ ಮುಗ್ಧತೆ ಅಂದ್ರೆ ಅದೇ ಅಲ್ವಾ? ಸ್ಕೂಲಿನ ಅವಧಿ ಇದ್ದಷ್ಟು ನಾವೂ ಹ್ಯಾಪಿ ಹ್ಯಾಪಿಯೇ... ಶಾಲಾ ಅವಧಿಯಲ್ಲೇನಾದ್ರೂ ಅಚಾನಕ್ಕಾಗಿ ರಜೆ ಕೊಟ್ರೆ ಇನ್ನೂ ಹ್ಯಾಪಿಯೇ.. ಯಾಕಂದ್ರೆ ಗೆಳೆಯರೊಟ್ಟಿಗೆ ಮೈದಾನದಲ್ಲೋ, ಮತ್ತೆಲ್ಲೋ ಆಟವಾಡಿ ನಾವು ಮನೆಗೆ  ಹೋಗುತ್ತಿದ್ದದ್ದು ಮಾಮೂಲಿ ಸಮಯಕ್ಕೆ. ಅಷ್ಟೂ ಹೊತ್ತು ಯಾರ ಅಡ್ಡಿಯಿಲ್ಲದೇ ದೇಹ ದಣಿಯವಷ್ಟು ಆಟದಲ್ಲಿ ತೊಡಗಿರುತ್ತಿದ್ವಿ. ಮನಸ್ಸು ಮಾತ್ರ ಇನ್ನಷ್ಟು ಆಟದ ಹುಮ್ಮಸ್ಸಿನಲ್ಲಿಯೇ ಇರುತ್ತಿತ್ತು. ಮತ್ತೊಂದು ರಜೆಗೆ ಕಾಯುತ್ತಿತ್ತು!
ಅಲ್ಲಿಗೆ ಮಾತು ಒಂದು ತಹಬದಿಗೆ ಬಂದು ನಿಂತಿತು. ಹೊಸ ವರ್ಷಾಚರಣೆ ಹೇಗ್ ಮಾಡ್ದೆ ಅಂತ ಆಕೆ ಕೇಳುತ್ತಲೇ, ನಾನು, ನನ್ನ ಹಸ್ಬೆಂಡ್ ಗೋವಾಗೋಗಿದ್ವಿ. ಫನ್ ಆಗಿತ್ತು, ಗ್ರಾಂಡ್ ಪಾರ್ಟಿ ಮಾಡಿದ್ವಿ ಅದೂ ಇದೂ ಅಂತ ಹೇಳುತ್ತಾ ಹೊರಟಳು. ಆದರೆ ಮಾರನೇ ದಿನವೇ ಇಬ್ಬರಿಗೂ ಯಾವುದೋ ವಿಷಯಕ್ಕೆ ಮನಸ್ತಾಪ ಆಗಿ ಮಾತುಕತೆ ಬಂದ್ ಆಗಿದೆ. ನಾನು ಅಮ್ಮನ ಮನೆಗೆ ಬಂದಿದ್ದೆ. ಈ ತಿಂಗಳು ಪೀರಿಯಡ್ಸ್ ಬೇರೆ ಆಗಿಲ್ಲ. ಅದ್ಕೆ ಚೆಕ್ ಅಪ್ ಮಾಡಿಸೋಣ ಅಂತ ಬಂದೆ. ಹಾಗೇನಾದ್ರೂ ಪಾಸಿಟೀವ್ ಇದ್ರೆ ತೆಗೆಸಿಬಿಡೋಣ ಅಂತ ಅಂದ್ಲು.
ಎಲಾ ಇವಳಾ! ಏನಾಶ್ಚರ್ಯ ಬೆರಳೆಣಿಕೆಯಷ್ಟೇ ದಿನದ ಹಿಂದೆ ಗಂಡನೊಟ್ಟಿಗೆ ನ್ಯೂಇಯರ್ ಸೆಲೆಬ್ರೇಷನ್ ಮಾಡಿದ ಖುಷಿಯಲ್ಲಿರಬೇಕಾದವಳು ಹೀಗೆಲ್ಲಾ ಮಾತಾಡುತ್ತಿದ್ದಾಳಲ್ಲ ಅಂತ. ಮನಸ್ತಾಪಕ್ಕೆ ಕಾರಣ ಕೇಳ್ಬೇಕು ಎನಿಸಿದರೂ, ಹಾಗೆಲ್ಲಾ ಕೇಳೋದು ತೀರಾ ಬಾಲಿಶತನವೆನಿಸಿತು. ಆದರೂ ಕೊಂಚ ಅನುಭವದ ಪರಿಧಿಯಲ್ಲಿ ಇದರಿಂದ ಭವಿಷ್ಯದಲ್ಲಾಗುವ ತೊಂದರೆಗಳ ಕುರಿತು ನನಗೆ ತಿಳಿದ ಮಟ್ಟಿಗೆ ಕನ್‍ವಿನ್ಸ್ ಮಾಡೋಕೆ ಟ್ರೈ ಮಾಡ್ದೆ. ಊಹೂ! ಆಕೆ ಕೇಳುವ ಪರಿಸ್ಥಿತಿಯಲ್ಲೇ ಇಲ್ಲ. ತಾನು ಮಾಡುತ್ತಿರುವುದೇ ಸರಿ ಎನ್ನುವ ಊವಾಚ ಮೊದಲೇ ಆಕೆ ಹಾಕಿಕೊಂಡಾಗಿದೆ. ನಾನಾದರೂ ಎಷ್ಟರವಳು. ಬಾಲ್ಯದ ಗೆಳತಿಯಾದರೂ ಕೆಲ ನಿಮಿಷಗಳ ಹಿಂದಷ್ಟೇ ಸಿಕ್ಕವಳು! ಮುಂದೆ ಸಿಗುತ್ತೇವೋ ಇಲ್ಲವೋ ಯಾವ ಗ್ಯಾರೆಂಟಿಯೂ ಇಲ್ಲದವಳು. ಆದರೂ, ನ್ಯೂಇಯರ್ ಸೆಲೆಬ್ರೇಷನ್ ದಿನದ ಬಗ್ಗೆ ಹೇಳುವಾಗಿನ ಅವಳ ಮುಖದ ನಗು, ಆನಂತರದ ವಿಷಯಗಳನ್ನು ಹಂಚಿಕೊಳ್ಳುವಾಗ ಇರಲಿಲ್ಲ. ಆ ಸಮಯಕ್ಕೆ ಮಾಡಿದ ಖರ್ಚು, ಮೋಜು, ಮಸ್ತಿ ಕೇವಲ ನೆನಪಿಗಷ್ಟೇ ಸೀಮಿತವಾಗಿ, ಉಳಿದ ನೋವುಗಳು ಬದುಕಿನ ಪರ್ಯಂತ ತನ್ನ ಅಧಿಪತ್ಯ ಸಾಧಿಸುವುದಾದರೆ! ವರ್ಷಾಚರಣೆಗೆ ಎಲ್ಲಿಯ ಅರ್ಥ?! ಆಗಲೇ ಥಟ್ಟನೆ ಹೊಳೆದದ್ದು, ಈ ವರ್ಷ ತಾನು ನ್ಯೂಇಯರ್ ವಿಷ್ ಹೇಳೋಕು ಕೇಳೋಕು ಮಧ್ಯರಾತ್ರಿ ಎಚ್ಚರದಲ್ಲಿರಲಿಲ್ಲ. ಕಾರಣ, ನಾನೂ ಕೂಡ ಯಾವುದೋ ಕ್ಷುಲ್ಲಕ ಕಾರಣದಿಂದ ಬೇಸತ್ತು, ಯಾವುದರ ಚಿಂತೆಯಿಲ್ಲದೇ, ಮಗನೊಟ್ಟಿಗೆ ಗಡದ್ದು ನಿದ್ದೆಗೆ ಜಾರಿಬಿಟ್ಟಿದ್ದೆ ಎಂಬುದು ನೆನಪಾಯ್ತು. ನೂತನ ವರ್ಷ ಆಚರಿಸಿದೇವೋ ಇಲ್ಲವೋ ಮುಖ್ಯವಲ್ಲ. ಅದು ಗತಿಸಿದ ಸಂಗತಿ. ಬದುಕಿನ ಆಚರಣೆ ಸಕಾಲದಲ್ಲಿ ಮಾಡದಿದ್ದರೆ ನಮ್ಮಂತಹ ನಿರುತ್ಸಾಹಿಗಳು ಬೇರೊಬ್ಬರಿರಲ್ಲ ಎಂಬುದರ e್ಞÁನೋದಯ ಅಂದು ಕಾಫಿ ಡೇನಲ್ಲಿ  ನನಗಾಯ್ತು.....

- ಭಾಚಿ

1 comment:

  1. ಬದುಕು ಒಂದು ಹರಿಯುತ್ತಿರುವ ನದಿಯಂತೆ.,

    ReplyDelete