Thursday 3 March 2016

ಪ್ರೀತಿಗೊಂದಿಷ್ಟು ಸಮಯ ಬೇಕಾಲ್ಲವಾ..!?



ಇಬ್ಬರ ಕಣ್ಣೋಟಗಳು ಆಗಾಗ್ಗೆ ಭೇಟಿಯಾಗುತ್ತಲೇ ಇರ್ತವೆ. ಉಹುಂ... ಮಾತಿಲ್ಲ ಕತೆಯಿಲ್ಲ! ಈಗೆಲ್ಲವೂ ಬಂದ್. ಮಾತು ಮಾತು ಮಾತು.. ಮಾತಿನಲ್ಲೇ ಮುಳುಗಿರುತ್ತಿದ್ದ ಮನಗಳಿಗೀಗ ಕಾಲ ಮಿತಿ ಇಲ್ಲದ ವನವಾಸದ ಸಮಯ. ತೀರಾ ಅನಿವಾರ್ಯ ಬಿದ್ದರೆ, ಔಪಚಾರಿಕ ಮಾತುಕತೆಯಷ್ಟೇ. ಕುಶಲೋಪರಿ ವಿಚಾರಿಸುವ ಧಾವಂತ ಇಬ್ಬರಿಗೂ ಇದೆ. ಆದರೆ, ಬಾಯ್ಬಿಟ್ಟು ಕೇಳುವ ಅನಿವಾರ್ಯತೆ ಇಬ್ಬರಿಗೂ ಒಂದೆಳೆಯೂ ಇದ್ದಂತಿಲ್ಲ. ಹೇಗಿದ್ದವರು ಹೇಗಾಗಿಬಿಟ್ಟರು ಎಂಬುದು ಅವರನ್ನೇ ಗಮನಿಸುತ್ತಿದ್ದ ಅದೆಷ್ಟೋ ಕಣ್ಣುಗಳ ಕುತೂಹಲ! ಆ ಕುತೂಹಲದ ತೆರೆ-ಮರೆಯಲ್ಲೂ ಅವರಿಬ್ಬರ ನಡುವೆ ಮಾತೇ ಆಡದಂತಹ ಯಾವ ಘಟನೆ ಸಂಭವಿಸಿತೆಂಬುದಕ್ಕೆ ಅವರಿಬ್ಬರ ಹೊರತಾಗಿ ಬೇರಾರಿಗೂ ಅದರ ಸುಳಿವಿಲ್ಲ. ಯಾವ ಕಾರಣಕ್ಕೂ ಅದರ ಗಂಧ-ಗಾಳಿಯೂ ಬಿಟ್ಟುಕೊಡಬಾರದು ಎಂಬ ಪಟ್ಟು ಇಬ್ಬರಿಗೂ ಇದ್ದಂತಿದೆ. ಅದಂತೂ ಹೊರ ಜಗತ್ತಿಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಯಾಕಿಷ್ಟು ಹಟ? ಯಾರನ್ನು ಮೆಚ್ಚಿಸಲು ಈ ಪರಿ ಮೌನ ಕಾದಾಟ?
ಪ್ರೀತಿಸುವ ಮನಗಳು ಇದ್ದಕ್ಕಿದ್ದ ಹಾಗೇ ಈ ಪರಿ ಬದಲಾಗುವುದೇಕೆ? ತಿಂಗಳ ಹಿಂದಷ್ಟೇ ಭೇಟಿಯಾದಾಗ ಇಬ್ಬರ ಮಾತುಗಳು, ಅವರ ನಡವಳಿಕೆಗಳು ಸಾರಿ ಸಾರಿ ಹೇಳಿದ್ದವು. ಇಬ್ಬರ ಬಳಿಯೂ ಮತ್ತೊಬ್ಬರ ಬಗ್ಗೆ ಗೇಲಿ ಮಾತಿಲ್ಲ, ಹಾಗಂತ ಸಮಾಧಾನದ ನಿಟ್ಟುಸಿರೂ ಇಲ್ಲ. ಕಾರಣ ಕೆದಕುವ ಗೋಜಿಗೆ ನಾನೂ ಹೋಗ್ಲಿಲ್ಲ. ಭೇಟಿಯಾದ ದಿನದಂದೇ ಮಧ್ಯರಾತ್ರಿ ಆಕೆ ಫೆÇೀನಲ್ಲಿ ಮಾತಿಗೆ ಸಿಕ್ಕಿದ್ದಳು. ಹುಡುಗಿ ಕೊಂಚ ಹೆಚ್ಚೇ ಎನಿಸುವಷ್ಟು ಭಾವುಕಳಾಗಿದ್ದಳು, ಆಗ ಹೇಳಿಬಿಟ್ಟಳು ಸಮಸ್ಯೆಯ ಗುಟ್ಟನ್ನ. ಅವನು ಮಾತು ಮಾತಿಗೂ ನಾವು ತುಂಬ ಅವಸರ ಪಡ್ತಿದ್ದೀವಿ ಅಂತನ್ನಿಸ್ತಿದೆ. ಒಂದೆರಡು ವರ್ಷ ಕಾಯೋಣ ಅಂದಿದ್ದ. ನಾನು ಚಕಾರವೆತ್ತದೆ ನಿಂತ ನಿಲುವಲ್ಲೇ ಒಪ್ಪಿಗೆ ಕೊಟ್ಟಿದ್ದೆ. ಪದೇ ಪದೆ ಮೆಸೇಜ್ ಮಾಡ್ಬೇಡ ಅಂದ ಅದನ್ನೂ ಬಂದ್ ಮಾಡ್ದೆ. ಕೊನೆಗೆ, ನಿನ್ನ ಮಾತುಗಳು ನನ್ನ ತುಂಬಾ ಡಿಸ್ಟರ್ಬ್ ಮಾಡ್ತಿದೆ ಕೆಲಸದಲ್ಲಿ ನಿಗಾ ಇಡಲು ಆಗ್ತಿಲ್ಲ ಅಂದ ನಾನು ಮಾತಾಡುವುದನ್ನೇ ನಿಲ್ಲಿಸಿ ಬಿಟ್ಟೆ. ಈಗ ನೋಡು ಅವನ ಪಾಡಿಗೆ ಅವನು, ನನ್ನ ಪಾಡಿಗೆ ನಾನು ಅಷ್ಟೇ! ಪ್ರೀತಿ ಉಳಿದಿದೆ ಎಂಬುದಕ್ಕೆ ಯಾವ ಕುರುಹೂ ಇಲ್ಲ..!
**
ಆಕೆ ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿ. ಓದನ್ನು ಮುಂದುವರೆಸಬೇಕು ಎಂಬ ಅದಮ್ಯ ಆಸೆ ಅವಳಿಗೆ. ಆದರೆ ಮನೆಯಲ್ಲಿ ತಂದೆ-ತಾಯಿಗೆ ಎದೆಯೆತ್ತರಕ್ಕೆ ಬೆಳೆದ ಮಗಳನ್ನು ಮದುವೆ ಮಾಡಿ ತಮ್ಮ ಜವಾಬ್ದಾರಿ ಇಳಿಸಿಕೊಳ್ಳುವ ಇರಾದೆ . ಆಗಲೇ ಕೂಡಿಬಂದಿತ್ತು ಶ್ರೀಮಂತ ಮನೆಯ ಸಂಬಂಧ. ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಅಂದ ಹಾಗಾಯ್ತು ಆಗಿನ ಪರಿಸ್ಥಿತಿ. ಹಿಂದೂ ಮುಂದು ಯೋಚಿಸದೆಯೇ ದೊಡ್ಡ ಜನ ಅಂತ್ಹೇಳಿ, ಮದುವೆ ಮಾಡಿ ಮುಗಿಸಿಯೇಬಿಟ್ಟರು. ಆದರೆ, ತಮ್ಮ ಕರ್ತವ್ಯ ಮುಗಿಯಿತೆಂದು ನೆಮ್ಮದಿಯ ನಿಟ್ಟುಸಿರು ಬಿಡುವ ಮುಂಚೆಯೇ ಆಕೆ ತವರಿಗೆ ವಾಪಾಸಾಗಿದ್ದಾಳೆ ಅದು 2ತಿಂಗಳ ಬಸಿರನ್ನೊತ್ತುಕೊಂಡು. ಇಬ್ಬರು ತಮಗೆ ತಾವು ಏನೆಂದೂ ಅರ್ಥ ಮಾಡಿಕೊಳ್ಳುವ ಮುಂಚೆಯೇ ಇಬ್ಬರಿಗೂ ತಮ್ಮ ಅಭಿರುಚಿಗಳು ಹಿಡಿಸಿಲ್ಲ, ಆದ ಸಣ್ಣ ಪುಟ್ಟ ಮನಸ್ತಾಪಗಳಿಗೆ ದೊಡ್ಡ ರಾದ್ದಾಂತ ಮಾಡಿ ಊರು-ಕೇರಿ ಒಂದಾಗುವ ಹಾಗೇ ಜಗಳಗಳು ನಡೆದುಹೋಗಿ ಇಬ್ಬರೂ ದೂಷಿಸಿಕೊಂಡು ಬೇರಾಗಿದ್ದಾರೆ. ಆಕೆ ತವರು ಮನೆ ಹಾದಿ ಹಿಡಿದರೆ, ಆತ  ಇನ್ನೊಂದು ಸಂಬಂಧಕ್ಕೆ ಕೈಚಾಚಿದ್ದಾನೆ.
ಆದರೆ ಗಂಡ ಹೆಂಡತಿಯ ನಡುವೆ ಮನಸ್ಸಿನ ಯಾವ ಭಾವಗಳು ಹಂಚಿಕೆಯಾಗಿಲ್ಲ. ದೇಹ ಒಂದಾಗಿದ್ದಕ್ಕೆ ಅವಳ ಬಸಿರು ಸಾಕ್ಷಿ ಹೇಳಿದ್ದರೆ, ಅವಳು ಆ ಪರಿ ಮನಕೆಡಿಸಿಕೊಂಡು ಹೊರಟು ಬಂದಿದ್ದಕ್ಕೆ ಮನಸ್ಸುಗಳು ಒಂದಾಗಲಿಲ್ಲ ಎಂಬ ಕುರುಹು ಗೋಚರವಾಗಿದೆ.   ಇತ್ತ ಇವಳ ಓದಿನ ಕನಸು ಅಲ್ಲೆ ಮಕಾಡೆ ಮಲಗಿಬಿಟ್ಟಿದೆ. ಇಲ್ಲ ಸಲ್ಲದ ಕಾರಣಗಳಿಗೆಲ್ಲಾ ಮುಖ ಸರಿಸುವಷ್ಟು ಮುನಿಸು. ಕೇವಲ ಎರಡೇ ತಿಂಗಳಿಗೆ ಇಬ್ಬರೂ ಹೇಳಿಕೊಳ್ಳಲಾರದಷ್ಟು ದೂರಾಗಿಬಿಟ್ಟಿದ್ದಾರೆ.
ಏನನ್ನೋ ಸಾಧಿಸ್ಬೇಕು ಅನ್ನುವ ಅದಮ್ಯ ಕನಸುಗಳನ್ನು ಹೊತ್ತ ಇಂದಿನ ಪ್ರೇಮಿಗಳು ತಮಗೆ ತಾವು ಸಮಯ ಕೊಟ್ಟುಕೊಳ್ಳುವುದಕ್ಕೆ ಆಸ್ಥೆ ವಹಿಸುವುದೇ ಇಲ್ಲ. ಪ್ರೀತಿಗೆ ಭದ್ರಬುನಾದಿಯಾಗಬೇಕಾದ  ಆ ಅಮೂಲ್ಯ `ಮಾತುಗಳು' ಕಾಲಹರಣ ಎನಿಸಿಬಿಡುವಷ್ಟು ಸಪ್ಪೆ ಸಪ್ಪೆಯಾಗಿಬಿಡುತ್ತದೆ.  ಅದೇ ಕಾರಣಕ್ಕಾಗಿಯೇ ಅವನೊಂದಿಗೆ ಇವಳು, ಇವಳೊಂದಿಗೆ ಅವನು ಅದೆಷ್ಟೋ ಭಾವಾಭಿರಾಗಗಳು ಹುಟ್ಟುತ್ತಲೇ, ಮನಬಿಚ್ಚಿ ಹೇಳಿಕೊಳ್ಳದೇ ಅಸುನೀಗಿರುತ್ತವೆ. ಅದೆಷ್ಟೋ ಕನಸುಗಳ ಹುಟ್ಟಿಗೆ ಪ್ರೇರಣೆಯಾಗಬೇಕಿದ್ದ ಮಧುರ ಬಾಂಧವ್ಯ ಚಿಗುರುವ ಹಾದಿಯಲ್ಲೇ ಜೀವ ತೆತ್ತಿರುತ್ತದೆ!
ಇಬ್ಬರ ಮಧ್ಯ ಇರಬೇಕಾದ ಮಧುರ ಮಾತುಗಳು ಸಮಯದ ಅಭಾವಕ್ಕೆ ಸಿಲುಕಿ ಕುಬ್ಜಗೊಂಡಿದೆ. ಸಣ್ಣ ಪುಟ್ಟ ವಾಗ್ವಾದಗಳೇ ದೊಡ್ಡದಾಗಿ ಕಾಣುತ್ತವೆ. ಇಷ್ಟಕ್ಕೆ  ಬೇಸತ್ತ ಮನಗಳು ಬೇರಾಗಲೊಂದು ಕಾರಣ ಹುಡುಕಿಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೂ ಬದುಕಲ್ಲಿ ಹೀಗೆ ಬಂದು ವಿರಮಿಸುವ ಪ್ರೇಮಗಳು, ಇಂತಹದ್ದೊಂದು ಬೇಸರದ ಅಧ್ಯಾಯಕ್ಕೆ ನಾಂದಿ ಹಾಡಿದ್ದಲ್ಲದೇ, ಜೀವಮಾನವಿಡೀ ಪ್ರೀತಿಯೆಂದರೆ ಸಾಕು ಅಸಮಾಧಾನದ ಬಳಲಿಕೆಗಳು ಮನಸ್ಸಿನ ಸ್ಮೃತಿಪಟದಲ್ಲಿ ಬಂದು ಮರೆಯಾಗುವ ಪರಿ ನೆನೆದರೇನೇ ಬದುಕಲ್ಲೇನಿದೆ ಎನಿಸುವಷ್ಟು ಜಿಗುಪ್ಸೆ ಉಂಟುಮಾಡುವುದಿಲ್ಲವಾ? ನಮಗಾಗಿ ಅಲ್ಲದಿದ್ದರೂ ಬೇಕಿದ್ದ ಪ್ರೀತಿಗಾಗಿಯಾದರೂ ಒಂದಿಷ್ಟು ಸಮಯ ಕೊಡುವುದು ನಮ್ಮನ್ನಿಷ್ಟ ಪಡುವ ಮನಸ್ಸುಗಳ, ಸಂಬಂಧಗಳ ಆರೋಗ್ಯಕ್ಕೆ ಒಳ್ಳೆಯದು ಅಲ್ಲವಾ..?

- ಭಾಚಿ 




No comments:

Post a Comment