Friday 30 December 2016

ಕಾಣುವ ಕಂಗಳಲ್ಲಿ ಹೊಸ ವರುಷ


ಹುಟ್ಟಿದಾಗಿನಿಂದ ನಾವು, ನಮ್ಮ ಸಹಿತ ಮನೆಯ ಗೋಡೆಗಳು ಅದೆಷ್ಟು ಬಣ್ಣ ಬಣ್ಣದ ಕ್ಯಾಲೆಂಡರ್​ಗಳನ್ನು ನೋಡಿಬಿಟ್ವಿ. ದಿನದ ಅಧಿಕ, ಕಡಿತ, ಒಂದಷ್ಟು ಸರ್ಕಾರಿ ರಜೆಗಳು ಹೆಚ್ಚಾಗಿದ್ದು ಬಿಟ್ಟರೆ, ಅಲ್ಲೇನೂ ಹೊಸತನ ಕಾಣಿಸಲೇ ಇಲ್ಲ. ಆದರೆ ನಾವು ಅಧಿಕಗೊಳಿಸಿಕೊಂಡಿದ್ದೇನು? ಕಡಿತ ಮಾಡಿಕೊಂಡಿದ್ದೇನು? ಎಂದಾದರೂ ಲೆಕ್ಕಾಚಾರ ಹಾಕಿದ್ದೀವಾ! ಇಷ್ಟಕ್ಕೂ ಅದಕ್ಕೆಲ್ಲಾ ಪುರುಸೊತ್ತೆಲ್ಲಿದೆ ಎನ್ನುವ ಸಬೂಬು ನಮ್ಮ ಏಕಮಾತ್ರ ಡೈಲಾಗ್ ಆಗಿರುವಾಗ, ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವ ಗೋಜಿಲ್ಲ. ಆದರೂ ಪ್ರತಿ ಸಂವತ್ಸರ ತಪ್ಪದಂತೆ ಹೊಸ ವರ್ಷವಾಗಿ ದಾಂಗುಡಿ ಇಟ್ಟು, ಹಳೆಯದರ ನೆನಪೆಲ್ಲವನ್ನು ಇತಿಹಾಸಕ್ಕೆ ಸೇರಿಸಿಬಿಡುತ್ತೆ. ವರ್ಷಕ್ಕೆ 365 ದಿನಗಳೇ ಇದ್ದರೂ, ಅಗಾಧ ನೋವು-ನಲಿವುಗಳ ಚೂರಣವನ್ನು ಕಾಲಗರ್ಭದಲ್ಲಿ ಹುದುಗಿಸಿಡುತ್ತಲೇ ಸಾಗುವ ಜಾಯಮಾನ ಅದರದು. ಅದಕ್ಯಾವ ಅಂಕೆ ಶಂಕೆಗಳಿಲ್ಲ. ಕಾಲಕ್ಕೆ ಮಾತ್ರವೇ ಎಲ್ಲವನ್ನೂ ಮೆಟ್ಟಿ ಸಾಗುವ ಗುಂಡಿಗೆ ಇರೋದು!
ಗ್ರೀಕ್ ಮತ್ತು ಈಜಿಪ್ಟಿಯನ್ ನಾಗರಿಕತೆಯಲ್ಲಿ ಹೊಸ ವರ್ಷದ ಹುಟ್ಟು ಮಗುವಿನ ಜನನಕ್ಕೆ ಸಮ. ಕಾಲಾಂತರದಲ್ಲಿ ಜಾಗತಿಕವಾಗಿ ಗ್ರಿಗೋರಿಯನ್ ಕ್ಯಾಲೆಂಡರ್ ಪ್ರಕಾರ ಅದು ಪ್ರತಿ ಖಂಡ, ದೇಶ, ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ, ಬೇರೆ ಬೇರೆ ದಿನಗಳಲ್ಲಿ ಆಚರಣೆಗೆ ಒಗ್ಗಿಕೊಂಡಿದೆ. ಉತ್ತರ ಭಾರತದಲ್ಲಿ ‘ದೀಪಾವಳಿ’ಯಾಗಿ ಹೊಸ ವರ್ಷ ಆಚರಣೆಯಾದರೆ, ಕೇರಳದಲ್ಲಿ ‘ವಿಶು’, ತಮಿಳುನಾಡಿನಲ್ಲಿ ‘ವರ್ಷಪಿರಪ್ಪು’, ಬೆಂಗಾಲಿಗರು ‘ನಬ’, ಬಾಂಗ್ಲಾದಲ್ಲಿ ‘ಪೈಲಾ ಬೈಸಾಖ್’, ಕಾಶ್ಮೀರದಲ್ಲಿ ‘ನವ್ರೆಹ್’, ಪಾರ್ಸಿ ಸಮುದಾಯದವರು ‘ನವ್ರೊಜ್’, ಪಂಜಾಬಿನಲ್ಲಿ ‘ಬೈಸಾಕಿ’, ಮಹರಾಷ್ಟ್ರೀಯರು ‘ಗುಡಿಪಾಡವ’, ಅಸ್ಸಾಮಿಗರು ‘ಗೊರು ಬಿರ್ಹ’, ಆಂಧ್ರ ಮತ್ತು ಕರ್ನಾಟಕದಲ್ಲಿ ‘ಯುಗಾದಿ’, ಹೆಸರಿನಲ್ಲಿ ಆಚರಣೆಗಳು ಜಾರಿಯಲ್ಲಿವೆ. ಯಾವ ಹೆಸರಿನಲ್ಲಿ ಆಚರಣೆಗಳು ನಡೆದುಬಂದಿದ್ದರೂ, ಅವೆಲ್ಲದರ ಆಶಯ ಮಾತ್ರ ಒಂದೇ, ಬದಲಾವಣೆಗೆ ತೆರೆದುಕೊಳ್ಳುವುದು, ಸಕಾರಾತ್ಮಕತೆ ಬೆಳೆಸಿಕೊಳ್ಳುವುದು, ಹೊಸತನ ಕಾಯ್ದುಕೊಳ್ಳೋದು. ಇವೆಲ್ಲ ಹೇಗೆ ಸಾಧ್ಯ ಎಂಬ ಪ್ರಶ್ನಾರ್ಥಕ ಚಿಹ್ನೆ ಬೇಡ. ಇಂದಿನ ಯುವಜನತೆ ಕಂಡುಕೊಳ್ಳಬೇಕಾದ ಸತ್ಯಗಳ ಕೆಲ ಪುಟ್ಟ ಪುಟ್ಟ ಕಥೆಗಳು ಇಲ್ಲಿವೆ. ಇವು ಎಲ್ಲೊ ಓದಿದವು, ಯಾರಿಂದಲೋ ಕೇಳಿದಂಥವು, ಸ್ಪಷ್ಟತೆ ಇಲ್ಲದೆ ಗೋಚರಗೊಂಡ ಸ್ವಂತ ಕಥೆಗಳಿಗೆ ಒಂದಿಷ್ಟು ಪ್ರೇರಣೆ ಒದಗಿ ಅವಕ್ಕೆ ಮೂರ್ತ ರೂಪ ಕೊಟ್ಟಂಥವು. ಕತೆ ಒಂದೊಂದೇ ಆದರೂ, ಅದರಿಂದ ದಕ್ಕುವ ಅನುಭವಗಳು ಬೇರೆ ಬೇರೆ. ನಿಜ, ಹೇಗಾದರೂ ಸರಿ ಅವುಗಳನ್ನು ಓದಿಕೊಳ್ಳಿ ನಿಮಗೂ ಏನಾದರೂ ಇದರಿಂದ ಹೊಳೆದರೆ, ಒಂದಿಷ್ಟು ತಾನೂ ಬದಲಾಗಬೇಕು ಎನಿಸಿದರೆ ಈಗಲೇ ಬದಲಾಗಿಬಿಡಿ. ಅನಿಸದಿದ್ರೆ ಯಾರ ತಕರಾರು ಇಲ್ಲ ಬಿಟ್ಟುಬಿಡಿ. ಬಟ್ಟೆ ತೊಟ್ಟ ರೂಪವೂ ನಿಮ್ಮದೇ, ಬಟ್ಟೆಯೊಳಗಿನ ಬೆತ್ತಲೆಯೂ ನಿಮ್ಮದೇ….
ಎಲ್ಲ ‘ಸರಿ’ಯಿರುವ ನಾವುಗಳು…!?
ಹಿಲರಿ ಎಲ್ಲ ಮಕ್ಕಳಂತೆ ಆರೋಗ್ಯವಾಗಿ ದಷ್ಟಪುಷ್ಟವಾಗಿ ಹುಟ್ಟಿದಾಕೆ. ನೃತ್ಯ ಮತ್ತು ಕ್ರೀಡೆಗಳಲ್ಲಿ ಆಕೆಗೆ ಅತೀವ ಆಸಕ್ತಿ. ಹಾಗೆಯೇ ಮುಂದೆ ನೃತ್ಯಗಾರ್ತಿಯಾದಳು ಕೂಡ. ಆದರೆ ಒಂದು ಭೀಕರ ಕಾಯಿಲೆ ಆಕೆಯನ್ನು ಹೇಗೆ ಜಡ್ಡು ಹಿಡಿಸಿತೆಂದರೆ, ಆಕೆಯ ಬಾಯಿ ಕಣ್ಣುಗಳು ಸಂಪೂರ್ಣವಾಗಿ ಮುಚ್ಚಿಬಿಟ್ಟವು. ಟ್ಯೂಬಿನಿಂದ ಆಕೆಗೆ ಆಹಾರ ಒದಗಿಸಲಾಗಿತ್ತು. ಉಸಿರಾಟ ಯಂತ್ರದ ಮೂಲಕ ಆಕೆ ಜೀವಂತವಾಗಿ ಉಳಿದಳಷ್ಟೇ. ಇಷ್ಟಾದರೂ ಆಕೆ ಎಂದೂ ಸಾಯಬೇಕು ಅಂದುಕೊಳ್ಳಲಿಲ್ಲ. ಹುಟ್ಟಿನಿಂದಲೇ ಆಕೆ ಅಂಗವಿಕಲೆಯಾಗಿದ್ದರೆ ಅದು ಬೇರೆ ಮಾತು. ಆದರೆ, ಆಕೆ ಎಲ್ಲರಂತೆ ಜಗತ್ತನ್ನು ಕಣ್ಣಲ್ಲಿ ಕಂಡವಳು. ಈಗ ಏನೂ ಇಲ್ಲದಂತೆ ಕೂರುವುದೆಂದರೆ ಅದು ಎಲ್ಲರಿಗೂ ಸಾಧ್ಯವಾಗದ ಮಾತು. ಆಕೆ ಹೀಗೆ 10 ವರ್ಷ ಕಳೆದಳು. ಅನಂತರ ಆಕೆಗೆ ತಂತ್ರಜ್ಞಾನದ ಆವಿಷ್ಕಾರದಿಂದ ಬಲಗಾಲಿನ ಹೆಬ್ಬೆರಳು ಮಾತ್ರ ನಿಯಂತ್ರಣದಲ್ಲಿಡುವಂತಾಯಿತು. ಅಷ್ಟು ಸಾಕಿತ್ತು ಆಕೆಗೆ. ಫಾಸಮ್ ಅನ್ನೋ ಯಂತ್ರದಿಂದ ಆಕೆ ಎಲ್ಲ ಕೆಲಸಗಳನ್ನು ಸ್ವಿಚ್ಚುಗಳ ಮೂಲಕ ಮಾಡತೊಡಗಿದಳು. ಅಷ್ಟಲ್ಲದೆ, ಓದಲು, ಬರೆಯಲು ಶುರು ಮಾಡಿದ ಆಕೆ ಅಂಗವಿಕಲರಿಗೆ ಮಾಡಿದ ಕೆಲಸ ಶ್ಲಾಘಿಸಿ 1973ರಲ್ಲಿ ಇಂಗ್ಲೆಂಡಿನ ರಾಣಿ ಎಮ್​ಇ ಪ್ರಶಸ್ತಿ ನೀಡಿ ಗೌರವಿಸುವ ಮಟ್ಟಕ್ಕೆ ಹಿಲರಿ ಬೆಳೆದಳು. ಆದರ್ಶವಾಗಿ ಬದುಕಿದಳು.
ಬುದ್ಧಿಯನ್ನೂ ಒಂದಿಷ್ಟು ಖರ್ಚು ಮಾಡಿ
ಒಬ್ಬ ಬಡಗಿ ಮರಗಳನ್ನು ಕಡಿಯುವುದಕ್ಕೆ ಗುತ್ತಿಗೆ ಪಡೆದನು. ಇದಕ್ಕಾಗಿ ಆತನಿಗೆ ಬಂಡವಾಳದ ರೂಪದಲ್ಲಿ ಒಂದು ಉತ್ತಮವಾದ ಗರಗಸ ಕೊಳ್ಳಬೇಕಿತ್ತು. ಆದರೆ, ಆತನಲ್ಲಿ ಅಷ್ಟು ದುಡ್ಡಿರಲಿಲ್ಲ. ಆದರೂ ಆತ ಸಾಲ ಮಾಡಿ ಗರಗಸ ಕೊಂಡು ಕೆಲಸ ಪ್ರಾರಂಭಿಸಿದ. ಮೊದಲ ದಿನ ಆತ 8 ಗಂಟೆಗಳಲ್ಲಿ 8 ಮರಗಳನ್ನು ಕತ್ತರಿಸಿದ. ಎರಡನೇ ದಿನ 5, ಮೂರನೇ ದಿನ 3, ನಾಲ್ಕನೇ ದಿನಕ್ಕೆ ಆತ ಎರಡು ಮರಗಳನ್ನು ಮಾತ್ರ ಕತ್ತರಿಸಲು ಶಕ್ತನಾದ. ತನ್ನ ಕಾರ್ಯಕ್ಷಮತೆ ಕುಗ್ಗುತ್ತಿರೋದಕ್ಕೆ ಬೇಸತ್ತು, ಆತ ಗುತ್ತಿಗೆ ಪಡೆದ ಮಾಲೀಕನ ಬಳಿ ಅಳಲು ತೋಡಿಕೊಂಡ. ಆತ ಕೇಳಿದ ಗರಗಸವನ್ನೇನೋ ಹೊಸತು ಕೊಂಡಿದ್ದೀಯಾ ಸರಿ, ಆದರೆ ಅದನ್ನು ಕೆಲಸಕ್ಕೆ ತಕ್ಕಂತೆ ದಿನನಿತ್ಯ ಹರಿತಗೊಳಿಸುತ್ತಿದ್ದೀಯಾ? ಆತನ ಉತ್ತರ ಇಲ್ಲ ಎಂಬುದಾಗಿತ್ತು. ಅವನು ದಿನನಿತ್ಯ 8ಗಂಟೆ ಕಾಲ ಎಲ್ಲರಂತೆ ಕೆಲಸ ಮಾಡುತ್ತಿದ್ದನಷ್ಟೇ. ಆದರೆ, ಯಾವುದೇ ಪೂರ್ವಸಿದ್ಧತೆ ಇಲ್ಲದೆ, ಮಾಡೋ ಕೆಲಸವನ್ನೇ ಮಾಡುತ್ತಾ, ಬಾಹ್ಯ ಬಲ ಮಾತ್ರ ಉಪಯೋಗಿಸುತ್ತಿದ್ದ. ಒಂದಿಷ್ಟು ತನ್ನ ಕಾರ್ಯಕ್ಷಮತೆಯನ್ನೂ ಹೆಚ್ಚಿಸಿಕೊಳ್ಳಲು ಬುದ್ಧಿಯನ್ನು ಖರ್ಚು ಮಾಡಿದ್ರೆ ಆತ ಅಂದುಕೊಂಡಿದ್ದನ್ನ ಒಂದು ವಾರಕ್ಕೆ ಮಾಡಿ ಮುಗಿಸಿಬಿಡಬಹುದಿತ್ತು.
ಅವರಂತೆ ನೀವಿರಬೇಕಿಲ್ಲ, ವಿಭಿನ್ನತೆ ರೂಢಿಸಿಕೊಳ್ಳಿ
ಒಬ್ಬ ಹುಡುಗ ಅಪ್ಪನಿಂದ ಬಂಡವಾಳ ಪಡೆದು ಅಂಗಡಿ ವ್ಯಾಪಾರ ಶುರುಮಾಡಿಕೊಂಡ. ಆದರೆ, ಸ್ವಲ್ಪ ದಿನದಲ್ಲಿಯೇ ಆತನಿಗೆ ತಾನು ಮಾಡುತ್ತಿದ್ದ ವ್ಯಾಪಾರದಲ್ಲಿ ಬಂಡವಾಳ ನಷ್ಟವಾಗುತ್ತಿದೆಯೆಂಬ ಅರಿವಾಯಿತು. ಖ್ಯಾತ ಬಿಜಿನೆಸ್ ಶಾಲೆಯಲ್ಲಿ ಎಲ್ಲ ಕಲೆಗಳನ್ನು ಕಲಿತು ಬಂದಿರುವ ತನ್ನ ವ್ಯಾಪಾರದಲ್ಲೇಕೆ ಹೀಗೆ ನಷ್ಟವಾಗುತ್ತಿದೆ. ಎಲ್ಲಿ ತಪ್ಪಾಗುತ್ತಿದೆ? ಇದಕ್ಕೆ ಪರಿಹಾರವೇನು ಎಂಬುದನ್ನು ಕಂಡುಕೊಳ್ಳಲು ತುಂಬಾ ಪ್ರಯಾಸಪಟ್ಟ. ಇದೇ ಯೋಚನೆಯಲ್ಲಿ ಆತ ಒಬ್ಬ ಸಾಧುವನ್ನು ಭೇಟಿ ಮಾಡಿದ. ತನ್ನ ವ್ಯಾಪಾರದಲ್ಲಾಗುತ್ತಿರುವ ನಷ್ಟ ವಿವರಿಸಿದ. ವ್ಯಾಪಾರದ ಬಗೆಗೆ ಲವಲೇಶವೂ ಗೊತ್ತಿರದ ಆ ಸಾಧು ಹೇಳಿದ್ದಿಷ್ಟು, ‘ದಿನಕ್ಕೆ ಎಷ್ಟು ಗಂಟೆ ವ್ಯಾಪಾರದಲ್ಲಿ ತತ್ಪರನಾಗಿದ್ದೀ? ಬೆಳಗ್ಗೆಯಿಂದ ಮಧ್ಯಾಹ್ನದ ತನಕ 4 ಗಂಟೆ ಆನಂತರ ಸಂಜೆಯ ಮೇಲೆ 4 ಗಂಟೆ. ಮಧ್ಯಾಹ್ನದ ಅವಧಿಯಲ್ಲಿ ಏನು ಮಾಡುತ್ತೀ? ಆ ವೇಳೆಯಲ್ಲಿ ಗ್ರಾಹಕರ್ಯಾರು ಬಾರದೇ ಇರುವುದರಿಂದ ನಾನು ಅಂಗಡಿ ಬಂದ್ ಮಾಡಿರುತ್ತೇನೆ. ಬರಲ್ಲ ಎಂದು ನಿನಗೆ ಹೇಗೆ ಗೊತ್ತು?’ ಆಗ ವ್ಯಾಪಾರಿ ತಬ್ಬಿಬ್ಬಾದ. ‘ಅಕ್ಕ ಪಕ್ಕದ ಅಂಗಡಿಗಳು ಆ ಹೊತ್ತಿನಲ್ಲಿ ಮುಚ್ಚುವುದರಿಂದ ತಾನು ಮುಚ್ಚುತ್ತಿದ್ದೇನಷ್ಟೇ’ ಎಂಬ ಉತ್ತರ ಬಂತು. ಆಗ ಸಾಧು, ‘ಒಬ್ಬರಂತೆ ತಾನೂ ಮಾಡಬೇಕೆಂಬ ಯಾವ ನಿಯಮವೂ ಇಲ್ಲವಲ್ಲ. ಗ್ರಾಹಕರು ಕೂಡ ಆ ಹೊತ್ತಿನಲ್ಲಿ ಎಲ್ಲ ಅಂಗಡಿಗಳು ಮುಚ್ಚಿರುತ್ತವೆಂದು ಬರದೇ ಇರಬಹುದಲ್ಲ’ ಎಂದರಷ್ಟೆ. ಈತ ಏನೋ ಹೊಳೆದವನಂತೆ ಅಲ್ಲಿಂದ ಹೊರಟು ಬಿಟ್ಟ. ದಿನಕ್ಕೆ 14ಗಂಟೆ ಕೆಲಸದಲ್ಲಿ ತೊಡಗಿಕೊಂಡ. ಒಂದು ವರ್ಷಕ್ಕೆ ಆತ ಕಳೆದುಕೊಂಡ ಹತ್ತುಪಟ್ಟು ಹೆಚ್ಚಿನಷ್ಟು ಸಂಪಾದಿಸಿದ.
ನಾಯಕತ್ವ ಬೇಡೋದು ಅಗಾಧ ತಾಳ್ಮೆ
ಒಂದು ತರಗತಿಯಲ್ಲಿ 8 ಜನ ಸಹಪಾಠಿಗಳಿರ್ತಾರೆ. ಅದರಲ್ಲಿ ಇಬ್ಬರು ಅತೀವ ಬುದ್ಧಿವಂತರು. ಒಂದು ದಿನ ಶಾಲಾಶಿಕ್ಷಕಿ ತನ್ನ ಅನುಪಸ್ಥಿತಿಯಲ್ಲಿ ಕೆಲವೊಂದು ಡಿಕ್ಟೇಷನ್ ತರಗತಿಗಳನ್ನು ನಡೆಸಲು ಒಬ್ಬರನ್ನು ಆಯ್ಕೆ ಮಾಡುವ ತುರ್ತು ಒದಗಿತು. ಅದಕ್ಕಾಗಿ ಒಬ್ಬ ವಿದ್ಯಾರ್ಥಿಗೆ ಅಷ್ಟು ಜವಾಬ್ದಾರಿ ನೀಡಬೇಕಿತ್ತು. ಅಲ್ಲದೆ, ಆತ ತರಗತಿಯ ಎಲ್ಲರನ್ನೂ ಸಂಭಾಳಿಸುವ ವಿವೇಚನೆಯುಳ್ಳವನಾಗಿರಬೇಕಿತ್ತು. ಅದಕ್ಕಾಗಿ ಟೀಚರ್ ಒಂದು ಸ್ಪರ್ಧೆ ಇಟ್ಟರು. ತಾನಿರುವಾಗಲೇ ನಾಲ್ಕು ದಿನ ಪರ್ಯಾಯವಾಗಿ ಸರದಿಯಲ್ಲಿ ಆ ಕರ್ತವ್ಯ ನಿಭಾಯಿಸಬೇಕಿತ್ತು. ಶುರುವಾಯಿತು ಜವಾಬ್ದಾರಿ. ಆದರೆ, ಅದರಲ್ಲಿ ಒಬ್ಬ ತೀವ್ರ ಮುಂಗೋಪಿ. ಇನ್ನೊಬ್ಬ ಅದಕ್ಕೆ ತದ್ವಿರುದ್ಧ. ಇಬ್ಬರೂ ಅವರ ಸಾಮರ್ಥ್ಯದ ಮೇರೆಗೆ ತರಗತಿಯನ್ನೇನೋ ಚೆನ್ನಾಗಿಯೇ ನಿಭಾಯಿಸುತ್ತಿದ್ದರು. ಆದರೆ, ಕೊಟ್ಟ ಕೆಲಸದಲ್ಲಿ ತೃಪ್ತಿ ಹೊಂದಿರದ ಆ ಮುಂಗೋಪಿ ಹುಡುಗ ತನಗೆ ಸಿಕ್ಕ ಆ ನಾಯಕತ್ವದ ಅವಕಾಶ ಬೇಡ ಎಂದು ಕೈಚೆಲ್ಲಿದ್ದ. ಸಹಜವೆಂಬಂತೆ ತರಗತಿಯನ್ನು ಚೆನ್ನಾಗಿಯೇ ನಿಭಾಯಿಸಿದ್ದರಿಂದ ಇನ್ನೊಬ್ಬ ಹುಡುಗನಿಗೆ ಜವಾಬ್ದಾರಿ ನೀಡಲಾಯಿತು. ಆನಂತರ ಅದು ಕಾಯಂ ಆಗಿಯೂ ಹೋಯಿತು. ಆನಂತರ ಆತ ಶಾಲೆಗೇ ಮುಖಂಡತ್ವ ವಹಿಸಿದ.
ದುರಭ್ಯಾಸಗಳು ನಿಮಗಿದ್ಯಾ?
ಇಬ್ಬರು ವ್ಯಕ್ತಿಗಳು ಒಂದು ದ್ವೀಪದಲ್ಲಿ ಕಂಠಪೂರ್ತಿ ಕುಡಿದು ಮತ್ತರಾಗಿದ್ದರು. ಕುಡಿದು ಸಾಕೆನಿಸಿದ ಮೇಲೆ ಅವರು ಅಲ್ಲೆ ಇದ್ದ ಒಂದು ಪುಟ್ಟ ದೋಣಿಯಲ್ಲಿ ಮನೆಗೆ ತಲುಪಲು ನಿರ್ಧರಿಸಿ, ಹುಟ್ಟು ಹಾಕಲು ಶುರುವಿಟ್ಟರು. ದ್ವೀಪದಿಂದ ಮನೆಗೆ ದೋಣಿಯಲ್ಲಿ ತಲುಪಿದರೆ ಒಂದು ಗಂಟೆಯ ಪ್ರವಾಸವದು ಅಷ್ಟೇ. ಆದರೆ, ಅವರು ಬೆಳಗಾದರೂ ಹುಟ್ಟು ಹಾಕುತ್ತಲೇ ಇದ್ದರು. ಆದರೆ ಅವರು ದೋಣಿ ಹತ್ತಿದ ಒಂದಿಂಚು ಆಚೀಚೆ ಕದಲಿರಲಿಲ್ಲ. ದೋಣಿಯನ್ನು ದಡಕ್ಕೆ ಕಟ್ಟಿರುವುದು ಅವರ ಅರಿವಿಗೆ ಬರಲೇ ಇಲ್ಲ. ಬಂದಾಗ ಆಗಲೇ ಬೆಳಗಾಗಿತ್ತು. ನಾವು ಎಲ್ಲಿಯವರೆಗೂ ನಕಾರಾತ್ಮಕ ವಿಚಾರಗಳಿಗೆ, ದುರಭ್ಯಾಸಗಳಿಗೆ ಜೋತು ಬೀಳುತ್ತೇವೆಯೋ ಅಲ್ಲಿಯವರೆಗೂ ನಾವಂದುಕೊಂಡದ್ದನ್ನು ಸಾಧಿಸಲಾಗದು.
 ಹೇಳದೆ ಮಾಡಿ ಗೆದ್ದೇ ಗೆಲ್ತೀರಾ
ವಾಹನ ಕಂಪನಿ ಯೊಂದರ ಮಾಲೀಕ ತನ್ನ ಬಳಿ ಕೆಲಸ ಮಾಡುವ ಉದ್ಯೋಗಿಗಳಿಗೆ ಒಂದಿಷ್ಟು ಉತ್ಸಾಹ ಮತ್ತು ಕ್ರಮಬದ್ಧತೆ ಮೈಗೂಡಿಸುವ ಸಮಯ ಒದಗಿಬಂತು. ಇದಕ್ಕಾಗಿ ಆತ ಒಂದು ಸಭೆ ಏರ್ಪಡಿಸಿದ. ಅಲ್ಲಿ ಅವರಿಗೆ ನಾನಾ ಗೇಮ್ಳಿದ್ದವು. ಆ ಗೇಮ್ಳಲ್ಲಿ ಒಂದು ಕಂಪನಿಯಿಂದ ಆ ಸಿಬ್ಬಂದಿ ಏನು ನಿರೀಕ್ಷಿಸುತ್ತಿದ್ದಾರೆಂಬುದನ್ನು ಒಂದು ಕಪ್ಪು ಹಲಗೆಯಲ್ಲಿ ಬರೆಯಬೇಕಿತ್ತು. ಅದೆಲ್ಲವನ್ನೂ ವೀಕ್ಷಿಸುತ್ತಿದ್ದ ಮಾಲಿಕ, ವೆಲ್ ನೀವು ನಿರೀಕ್ಷಿಸುವ ಎಲ್ಲವನ್ನೂ ನಾನು ನೀಡಬಲ್ಲೆ. ಆದರೆ, ನಾನು ನಿಮ್ಮಿಂದ ಏನನ್ನು ನಿರೀಕ್ಷಿಸುತ್ತಿದ್ದೀನೆಂದು ಯಾರಾದರೂ ಹೇಳಬಲ್ಲಿರಾ ಎಂದು ಪ್ರಶ್ನೆಯಿತ್ತನು. ಸಿಬ್ಬಂದಿಗಳು ಎಲ್ಲರೂ ಕಾಯುತ್ತಿದ್ದವರಂತೆ ಒಂದೊಂದಾಗಿ, ನಿಷ್ಠೆ, ಪ್ರಾಮಾಣಿಕತೆ, ಇನ್ನೊಂದಿಷ್ಟು ಮಾರ್ಕೆಟಿಂಗ್ ಸ್ಕಿಲ್ಸ್, ಗ್ರಾಹಕಸ್ನೇಹಿ ಮನೋಭಾವ, ಸಮರ್ಪಣೆ.. ಹೀಗೆ ಒಂದಾದರೊಂದರಂತೆ ಪಟ್ಟಿ ನೀಡುತ್ತಾ ಹೋದರು. ಮಾಲಿಕನಿಗೆ ಇಷ್ಟೇ ಸಾಕಿತ್ತು. ಇವೆಲ್ಲವನ್ನೂ ನೀವೂ ನನಗೆ ಕೊಟ್ಟಿದ್ದೇ ಆದರೆ, ನೀವು ನಿರೀಕ್ಷಿಸುವ ಎಲ್ಲವನ್ನೂ ನೀಡುತ್ತೇನೆ ಎಂದು ಆಶ್ವಾಸನೆಯಿತ್ತನು. ಇದರಿಂದ ಅವರ ಮಾರಾಟ ಸ್ಪರ್ಧೆ ಹೆಚ್ಚಿತು. ಮಾಲಿಕ, ಸಿಬ್ಬಂದಿಗಳಿಗೆ ಹೀಗೆ ಮಾಡಿ, ಹಾಗೆ ಮಾಡಿ ಅನ್ನುವುದಕ್ಕಿಂತ ಅವರಿಗೆ ಸಂಪೂರ್ಣ ಸ್ವಾತಂತ್ರ ಕೊಟ್ಟು, ಹೇಳದೆಯೇ ಎಲ್ಲ ಹೇಳಿ ಮುಗಿಸಿದ್ದ. ಅಲ್ಲದೆ, ಇತರರನ್ನು ಸಂತೋಷಗೊಳಿಸಿ ತಾನೂ ಗೆದ್ದಿದ್ದ.
 ಏನು ಯೋಚಿಸ್ತಿರೋ ನೀವು ಅದೇ ಆಗ್ತೀರಿ
ಒಬ್ಬ ಕಥೆಗಾರ ತನ್ನ ಒಂದು ಪ್ರವಾಸ ಪುಸ್ತಕದ ಬರಹಕ್ಕೆ ಒಂದಿಷ್ಟು ಅನುಭವಗಳು ಬೇಕೆಂಬುದಾಗಿ ಒಂದು ನಗರದ ನಿಲ್ದಾಣಕ್ಕೆ ಭೇಟಿ ನೀಡಿದ. ಅಲ್ಲಿ ಒಂದೇ ಕಡೆಯಿಂದ ಬಂದ ನಾನಾ ವ್ಯಕ್ತಿಗಳು ಅವನಿಗೆ ಎದುರಾಗುತ್ತಾರೆ. ಅಲ್ಲಿ ಇಬ್ಬರನ್ನು ಆಯ್ಕೆ ಮಾಡಿಕೊಂಡು ಒಬ್ಬೊಬ್ಬರನ್ನು ಪ್ರತ್ಯೇಕವಾಗಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುವಂತೆ ಕೇಳಿಕೊಂಡ. ಸಂದರ್ಶನ ಆರಂಭವಾಯ್ತು. ನೀವೆಲ್ಲಿಂದ ಬಂದಿರಿ. ನೀವು ಬಂದ ಜಾಗದಲ್ಲಿದ್ದ ಜನರು ಎಂತಹವರಾಗಿದ್ದರು ತಿಳಿಸಿ ಎಂಬ ಎರಡು ಪ್ರಶ್ನೆಗಳನ್ನು ಇಬ್ಬರಿಗೂ ನೀಡಿದ. ಇಬ್ಬರೂ ಪ್ರತ್ಯೇಕವಾಗಿ ಉತ್ತರಗಳನ್ನು ಹೇಳಿದರು. ಮೊದಲನೆಯವನು ನಾನು ಮಿಲಿಂದ್​ನಿಂದ ಬಂದೆ. ಅಲ್ಲಿನ ಜನರು, ಸುಳ್ಳುಗಾರರು, ಮೋಸಗಾರರು ಹಾಗೂ ವಾಚಾಳಿಗಳು ಎಂದ. ಮತ್ತೊಬ್ಬ ನಾನು ಮಿಲಿಂದ್​ನಿಂದ ಬಂದೆ, ಅಲ್ಲಿನ ಜನರು ಸತ್ಯವಂತರು, ದಯಾಮಯಿಗಳು, ವಿಚಾರವಂತರು ಎಂದು ಹೇಳುತ್ತಾನೆ. ಆಗ ಇಬ್ಬರಿಗೂ ಆ ಕಥೆಗಾರ ಒಂದೇ ಉತ್ತರ ನೀಡುತ್ತಾನೆ. ಇಲ್ಲಿಯೂ ಅಂತದ್ದೇ ಜನರಿದ್ದಾರೆ. ನೀವು ಇಲ್ಲಿಯೂ ಅಂತದ್ದೇ ಅನುಭವಗಳನ್ನು ಕಾಣಬಲ್ಲಿರಿ!
ಎಲ್ಲಿ ಕಳೆದಿದ್ದೀರೋ ಅಲ್ಲೇ ಹುಡುಕಿ
ಒಬ್ಬ ಸಿರಿವಂತ ಹುಡುಗ ಓದಿನಲ್ಲಿ ಹಿಂದುಳಿದಿದ್ದ ಆದರೂ, ಆತ ಓದಿನಲ್ಲಿ ಯಶ ಸಾಧಿಸಬೇಕೆಂದು ಅಂದುಕೊಳ್ಳಲೇ ಇಲ್ಲ. ಅಪ್ಪನ ಅಕಾಲಿಕ ಮರಣದಿಂದ ಈತನಿಗೆ ಮುಂದೇನು ಮಾಡಬೇಕೆಂಬುದು ತಿಳಿಯದಾಯಿತು. ಸಂಸ್ಥೆಯನ್ನು ಹೇಗೆ ನಡೆಸಬೇಕು. ಚರ್ಚೆಗಳಲ್ಲಿ ಹೇಗೆ ಭಾಗವಹಿಸಬೇಕು ಎಂಬುದರ ಅರಿವೂ ಇಲ್ಲದಂತಾಯ್ತು. ಅಪಾರ ಆಸ್ತಿ ನೋಡಿಕೊಳ್ಳಲಾಗದೇ ಆತ ತತ್ತರಿಸಿಹೋದ. ಇದಕ್ಕೆಲ್ಲ ಕಾರಣವಾಗಿದ್ದು, ಓದಿನಲ್ಲಿ ಆತ ತೋರಿದ ನಿರ್ಲಕ್ಷ್ಯ ಒಂದು ದಿನ ಜ್ಞಾನೋದಯವಾಗಿ ವಿದ್ಯೆಯಿಲ್ಲದೇ, ಅದೆಷ್ಟೇ ಶ್ರೀಮಂತಿಕೆಯಿದ್ದರೂ ಕಾಪಾಡಿಕೊಳ್ಳಲಾಗದು ಎಂಬ ಅರಿವಾಗಿ, ಆತ ತನ್ನ 32ನೇ ವಯಸ್ಸಿಗೆ ಮತ್ತೆ ಓದಲು ಶುರು ಮಾಡಿಕೊಂಡ. ಅದರ ಜತೆಗೆ ಬೇಕಾದ ಕೌಶಲಗಳನ್ನು ಕಲಿತ. ಆನಂತರ ಆತನ ಯಶಸ್ಸಿನ ಪಯಣ ಕೊನೆ ಕಾಣಲೇ ಇಲ್ಲ.
ಸ್ಮಾರ್ಟ್ ಆಗಿದ್ರೆ ಕೆಲಸ ಸಲೀಸು…
ಪುರಾತನ ಲೈಬ್ರರಿಗೆ ಒಬ್ಬ ಹೊಸದಾಗಿ ಗ್ರಂಥಪಾಲಕನಾಗಿ ಸೇರಿಕೊಂಡ. ಸೇರಿದ ಕೆಲವೇ ದಿನಗಳಿಗೆ ಅವನಿಗೆ ತಿಳಿದದ್ದು, ಅದು ಹೇಳಿಕೊಳ್ಳಲಷ್ಟೇ ಪುರಾತನ. ಅಲ್ಲಿಗೆ ಭೇಟಿ ನೀಡುವವರ್ಯಾರು ಇತಿಹಾಸ ಸೇರಿ ಹಳೆಯ, ಮೌಲ್ಯಯುತವಾದ ಪುಸ್ತಕಗಳನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಆಗ, ಗ್ರಂಥಪಾಲಕ ಒಂದು ಉಪಾಯ ಮಾಡಿದ. ಹಳೆಯ ಪುಸ್ತಕಗಳ ಪಟ್ಟಿ ಮಾಡಿ, ಅದನ್ನು ಒಂದೆಡೆ ಜೋಡಿಸಿ ಅವುಗಳ ಮೇಲೆ ಒಂದು ಲೇಬಲ್ ಅಂಟಿಸಿದ. ಅದು ಹೀಗಿತ್ತು ‘ಈ ಪುಸ್ತಕಗಳನ್ನು ಓದುವುದು ಬಹಳ ಕಷ್ಟ. ಹಾಗೇನಾದರೂ ಓದಬೇಕೆಂದರೆ ಅಪಾರ ತಿಳಿವಳಿಕೆ ಬೇಕು.’ ಹೀಗೆ ಮಾಡಿದ ಎರಡೇ ದಿನಗಳಲ್ಲಿ ಆ ಕಬೋರ್ಡ್​ನಲ್ಲಿ ಒಂದೂ ಪುಸ್ತಕ ಉಳಿದಿರಲಿಲ್ಲ.
ಎಲ್ಲಿ ಸಿಕ್ಕರೂ ಸರಿ ಪ್ರೇರಣೆಯನ್ನು ಹೆಕ್ಕಿಕೊಳ್ಳಿ
ಹದಿಹರೆಯದ ಒಬ್ಬ ಹುಡುಗ ತಾನಿನ್ನೂ ಬದುಕಲು ಲಾಯಕ್ಕಿಲ್ಲ. ಈ ಬದುಕಿಗೆ ಯಾವುದೇ ಅರ್ಥವಿಲ್ಲ. ಇಷ್ಟಪಟ್ಟದ್ದು ಯಾವುದೂ ದಕ್ಕುತ್ತಿಲ್ಲ, ಇಷ್ಟಕ್ಕೂ ನಾನು ಅದನ್ನು ಇಷ್ಟಪಟ್ಟಿದ್ದಕ್ಕೇ ನನಗದು ಸಿಗಲಿಲ್ಲ, ನಾನೊಬ್ಬ ದುರದೃಷ್ಟವಂತ ನನಗೆ ಏನೂ ಮಾಡಲು ಆಗದು ಎಂದು ಅಂದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಒಂದು ದಾರಿಯಲ್ಲಿ ಸಾಗುತ್ತಿದ್ದ. ದಾರಿ ಮಧ್ಯೆ ಒಬ್ಬ ರೈತ ಸಿಕ್ಕ. ಆತ ತನ್ನ ಎತ್ತುಗಳೊಂದಿಗೆ ಒಂದೆಡೆಯಿಂದ ಇನ್ನೊಂದೆಡೆಗೆ ತುಂಬು ಕೊಡಗಳಲ್ಲಿ ನೀರನ್ನು ಸಾಗಿಸುತ್ತಿದ್ದ. ಆ ರೈತನಿಗೆ ಎರಡು ಬಾರಿಯಿಂದ ನೀರಾವರಿ ತೊಂದರೆಯಿಂದ ಬೆಳೆ ಕೈ ಹತ್ತಿರಲಿಲ್ಲ. ಆದರೂ, ಆತ ಬೆಳೆ ಬೆಳೆಯುವುದನ್ನು ನಿಲ್ಲಿಸದೇ, ಈ ವರ್ಷವೂ ಪೈರನ್ನು ಹಾಕಿ, ಮಾಡುವ ಕೆಲಸವನ್ನೇ ಮತ್ತಷ್ಟು ಶ್ರದ್ಧೆಯಿಂದ ಮಾಡಲು ಮುಂದಾಗಿದ್ದ. ಆತನ ಅತೀವ ತಾಳ್ಮೆ, ಕಳೆದುದ್ದಕ್ಕೆ ಬೇಸರಿಸದೇ, ಮತ್ತೆ ಅದೇ ಕೆಲಸದಲ್ಲಿ ತೊಡಗಿಕೊಂಡಿದ್ದರ ಲವಲವಿಕೆಯನ್ನು ಆತ ಗಮನಿಸಿದ. ತನ್ನಲ್ಲೇ ಆತ ಕೆಲ ಮಾತುಗಳನ್ನು ಹೇಳಿಕೊಂಡ. ತನಗೇ ಈ ರೈತನಿಗಾದಂಥ ಯಾವ ನಷ್ಟಗಳೂ ಆಗಿಲ್ಲ. ತಾನು ಅಂದುಕೊಂಡಿದ್ದು ಸಿಗುವುದಿಲ್ಲ ಎಂದು ಭಾವಿಸಿದ್ದೇನೆ. ಇಷ್ಟಕ್ಕೂ ನಾನದನ್ನೂ ಪಡೆಯುವುದಕ್ಕೆ ಈ ರೈತನ ಹಾಗೇ ಯಾವ ವಿಧವಾದ ಪ್ರಯತ್ನವನ್ನೂ ಮಾಡಿಯೇ ಇಲ್ಲ. ಅಂಥಾದ ಮೇಲೆ ಸಿಗುತ್ತಿಲ್ಲ ಎಂದು ಕರುಬುತ್ತಿರುವುದರಿಂದ ಆದ ಪ್ರಯೋಜನವಾದರೂ ಏನು? 
ಇಷ್ಟಕ್ಕೂ ಜಗತ್ತಿನಾದ್ಯಂತ ಆಚರಿಸೋ ನ್ಯೂ ಇಯರ್ ಆಚರಣೆಗೆ ಬಂದದ್ಹೇಕೆ ಗೊತ್ತಾ? ತಪ್ಪುಗಳಿಗೂ/ನೋವುಗಳಿಗೂ ಒಂದು ಅಂತ್ಯ ಕಾಣಿಸಿ ಹೊಸ ಬದುಕನ್ನ ಆಹ್ವಾನಿಸಿ ಹೊಸ ಮನುಷ್ಯರಾಗೋಕೆ. ನ್ಯೂನತೆಗಳನ್ನು ಕಳಚಿ, ಹೊಸದಾಗಿ ರೂಪುಗೊಳ್ಳೋದಕ್ಕೆ. ನಾವುಗಳು, ನೀವುಗಳು ಯಾವತ್ತಾದರೂ ಸರಿಯೇ, ಆ ಅವಕಾಶದಿಂದ ವಂಚಿತರಾಗದೇ ಬಂದದ್ದನ್ನು ಬಂದ ಹಾಗೆ ಸ್ವೀಕರಿಸಿ, ‘ಇಂದಿಗಿಂತ ಮುಂದಿನ ದಿನಗಳು ಅದ್ಭುತವಾಗಿರಲಿವೆ ಮತ್ತು ಆ ಅದ್ಭುತವನ್ನ ನಾನೇ ಸೃಷ್ಟಿಸಿಕೊಳ್ಳುತ್ತೇನೆ’ ಎಂಬ ಸಂಕಲ್ಪ ಮಾಡೋಣ. ಇಷ್ಟು ಸಾಕಲ್ವ 2017ನ್ನು ಯಶಸ್ವಿಯಾಗಿ ಪೂರ್ಣಗೊಳಿಸೋಕೆ. ಜಸ್ಟ್ ಎಂಜಾಯ್.

-| ಭಾಚಿ.

No comments:

Post a Comment