Thursday, 29 January 2015

ಋತುಮಾನದ ಮೌನ ಸಾಕು
ಸದ್ದಾಗಿಬಿಡು ಮನದ ಮಾತಿಗೆ
ಅಗಲಿಕೆಯ ನೋವು, ನಿಟ್ಟುಸಿರ ಕಾವು
ಬೇಗುದಿಯ ಭಾವ  ದುಸ್ತರವೀ ಬದುಕಿಗೆ..!!

ಒಲವ ಹೊಳೆ ಹರಿಸಿದ
ನಿನ್ನ ಕಣ್ಣೊಳಗೆ ಬಚ್ಚಿಟ್ಟು ಹುದುಗಬೇಕಿದೆ
ಯಾರಿಗೂ ಕಾಣದಂತೆ, ಬೇರಾರೂ ನೋಡದಂತೆ
ಅಲ್ಲೇ ಸಂಚರಿಸಬೇಕಿದೆ
ನಿನಗೂ ತಿಳಿಯದಂತೆ, ನಿನ್ನೊಳಕ್ಕೆ ಇಳಿಯದಂತೆ..!!

ಕಲ್ಪನೆಗಳು ಸಾಕಾಗಿದೆ,
ವಾಸ್ತವವ ಅರಿಯಬೇಕಿದೆ
ನಿನ್ನ  ಇನ್ನಂತೂ ಸೇರಬೇಕಿದೆ
ಕಡಲ ಅಲೆಗಳು ಅಪ್ಪುವಂತೆ
ಅಲ್ಲೇ ನೆಲೆ ಹೂಡಬೇಕಿದೆ
ಮತ್ಸ್ಯಕ್ಕೂ ತಿಳಿಯದಂತೆ, ಅಂಬಿಗನಿಗೂ ಮುಟ್ಟದಂತೆ..!!

ಹುಟ್ಟು-ಸಾವಿಗೆ ಅರ್ಥ ತಂದಿರುವೆ
ಬದುಕು ಚಿಂತೆಗಳ ಸಂತೆ
ಅಲ್ಲಿ ನಾನಿಲ್ಲ, ಅಲ್ಲಿ ನೀನೂ ಇಲ್ಲ
ಇಬ್ಬರೂ ಸೇರಿ ಸೌಧ ನಿರ್ಮಿಸಬೇಕಿದೆ
ಯಾರೂ ಕೆಡುಹದಂತೆ, ಮತ್ಯಾರೂ ಒಳಬಾರದಂತೆ..!!

- ಭಾಚಿ

Thursday, 1 January 2015

‘ಅಂತರಂಗದ ಕನ್ನಡಿ’



ಅದ್ಯಾಕೋ ಅಂತರಂಗದ
ಕನ್ನಡಿ ಎನ್ನ ನೋಡಿ ನಗುತ್ತಿದೆ
ಕ್ಷಣದಲ್ಲೇ ಬದಲಾಗುವ
ಹೆಣ್ಮನವ ಕಂಡು
ಮುಸಿಮುಸಿ ನಗುತ್ತಿದೆ
ಅಂತರಾಳದ ನೋವುಗಳ
ಕಂಡು ಗಹಗಹಿಸಿ
ನಗುತ್ತಿದೆ
ನೋವುಗಳು ಇನ್ನಿಲ್ಲದ
ಸಂಭ್ರಮಾಚರಣೆಯಲ್ಲಿ
ತೊಡಗಿವೆ
ಅದ್ಯಾವಾವುದೋ
ಕಾಣದ ಕೈಗಳು
ಹಿಡಿದಿಡಿದು ಜಗ್ಗುತ್ತಿವೆ
ಮನದ ಮಂಪರನು
ಸರಿಸಲು ಹರಸಾಹಸ
ಪಡುತ್ತಿವೆ
ಶ್........
ದಿಗ್ಬ್ರಮೆಗಳಿಗೆ ದಿಗ್ಬಂಧನ
ಹಾಕುವ ಹೊತ್ತು!!!!!!!

- ಭಾಚಿ