Thursday 29 September 2016ಬದುಕೆನ್ನುವುದು ರಾತ್ರೋ ರಾತ್ರಿ ರೂಪುಗೊಳ್ಳುವುದಿಲ್ಲ. ಅದಕ್ಕೆ ಎಷ್ಟೋ ವರ್ಷಗಳ ತಪಸ್ಸು ಬೇಕು. ನಿಯಮ ಬೇಕು, ನಿರೀಕ್ಷೆ ಬೇಕು, ಎಲ್ಲಕ್ಕಿಂತ ಹೆಚ್ಚಾಗಿ ಒಂದು ಮುಷ್ಠಿ ಹೆಚ್ಚೇ ಎನಿಸುವಷ್ಟು ಶ್ರದ್ಧೆ ಬೇಕು. ಒಂದು ಕಡೆಯಿಂದ ಅದನ್ನ ಕಟ್ಟಿಕೊಳ್ಳುತ್ತಾ ಬರಬೇಕು. ಅಪ್ಪಿ ತಪ್ಪಿ ಕೂಡ ಎಲ್ಲಿಯೂ ಆ ತಪಸ್ಸಿಗೆ ಭಂಗ ಬರದಂತೆ ಎಚ್ಚರ ವಹಿಸಬೇಕು..!
ನಿಜಕ್ಕೂ ಇವಿಷ್ಟು ಅನುಸರಿಸಿz್ದÉೀ ಆದರೆ ಕನಸಿಗೆ ರೆಕ್ಕೆಕಟ್ಟಿ ಅದನ್ನ ತಲುಪುವುದೇ ತನ್ನ ಗುರಿ ಎಂದುಕೊಂಡು ಹೊರಟರೆ, ಅಂದುಕೊಂಡ ಬದುಕನ್ನ ಅರ್ಧಪಾಲು ದಕ್ಕಿಸಿಕೊಂಡಂತೆ. ಆದರೆ ಕೆಲ ನ್ಯೂನತೆಗಳನ್ನ ಬಗಲಲ್ಲೇ ಇರಿಸಿ, ಮನಸ ಮೂಲೆಯಲ್ಲಿ ಇದು ನನ್ನಿಂದಾ ಸಾಧ್ಯವಾ ಎಂದು ಅಳುಕಿಟ್ಟುಕೊಂಡೇ ಸಾಗಹೊರಟವರು ಅದೆಷ್ಟೋ ಮಂದಿ ಮಗುಚಿಬಿದ್ದಿದ್ದಾರೆ, ಅರ್ಧದಲ್ಲೇ ಕೈಚೆಲ್ಲಿ ಇದು ತನ್ನಿಂದ ಸಾಧ್ಯವೇ ಇಲ್ಲ ಎಂದು ಮರಳಿದವರಿದ್ದಾರೆ. ಇನ್ನೂ ಕೆಲವರು ದಿಕ್ಕನ್ನೇ ಬದಲಿಸಿ, ಕೈಗೊಪ್ಪಿದ ಕಾಯಕದಲ್ಲಿ ಯಶಸ್ಸು ಗಳಿಸಿಕೊಂಡವರಿದ್ದಾರೆ.
ಆರು ವರ್ಷಗಳ ಹಿಂದೆ ಪತ್ರಿಕೋದ್ಯಮದ ಪದವಿ ಮುಗಿಸಿ, ಒಂದು ಖಾಸಗಿ ಸಂಸ್ಥೆಗೆ ಇಂಟರ್ನಿಯಾಗಿ ಸೇರಿದಾಗ ಸ್ವಭಾವತಃ ಒಂದಷ್ಟು ಉತ್ಸಾಹ, ಆಸಕ್ತಿ, ಎಲ್ಲಕ್ಕೂ ಹೆಚ್ಚಾಗಿ ಆ ಪತ್ರಿಕೆಯಲ್ಲಿ ತನ್ನದೊಂದು ಬೈಲೈನ್ ಬರಬೇಕೆಂಬ ಧಾವಂತದಲ್ಲಿ `ಅ'ಪೂರ್ಣಗೊಂಡ  ಲೇಖನವೊಂದನ್ನು ಸಂಸ್ಥೆಯ ಸಹಾಯಕ ಮುಖ್ಯಸ್ಥರ ಮುಂದಿಟ್ಟಿದ್ದೆ. ಪ್ರಕಟಗೊಳಿಸುವಂತೆ ಮನವಿಯನ್ನೂ ಮಾಡಿದ್ದೆ. ಆದರೆ ಅವರು ನೇರವಾಗಿ ಲೇಖನ ಸರಿಯಾಗಿ ಮೂಡಿಬಂದಿಲ್ಲ ಎನ್ನಲೇ ಇಲ್ಲ. ಬದಲಾಗಿ ಆ ಲೇಖನದ ವಿಭಿನ್ನ ಕೋನಗಳನ್ನು ಸ್ಪಷ್ಟ ಉದಾಹರಣೆಗಳೊಂದಿಗೆ ವಿವರಿಸಿ ಹೇಳಿದ್ದರು. ಇದನ್ನ ಹೀಗೂ ಬರೆಯಬಹುದು. ಹೀಗೂ ಯೋಚಿಸಬಹುದು. ಎಲ್ಲರೂ ಬರೆಯುವ ಹಾಗೆಯೇ ಬರೆಯಬೇಕೆಂದೇನಿಲ್ಲ, ಆಲೋಚನೆಗಳು ಬದಲಾದಷ್ಟು, ಓದುಗರು ಬರಹಗಳನ್ನು ನಮ್ಮಂತೆಯೇ ಪ್ರೀತಿಸುತ್ತಾರೆ. ಪ್ರಯೋಗ ಬರಹಗಳು ಸತ್ವಯುತವಾಗಿರಲಿ. ಯಾವುದೇ ವಿಷಯ ಆಯ್ಕೆ ಮಾಡಿಕೊಂಡರೂ, ಅದರ ಆಳಕ್ಕಿಳಿದು ಅಧ್ಯಯನ ಮಾಡಿಯೇ ಲೇಖನಕ್ಕಿಳಿಸಬೇಕು. ಮತ್ತು ಅವರು ನನಗರರ್ಥವಾಗುಂತೆ ಹೇಳಿದ್ದಿಷ್ಟು `ಪತ್ರಕರ್ತರು ಯಾವಾಗಲೂ ಕುರಿಗಳಂತೆ ಇರಬೇಕು. ಒಂದು ಕಡೆಯಿಂದ ಅದನ್ನು ತಿನ್ನುತ್ತಾ ಬರಬೇಕು, ಇನ್ನೊಂದು ಕುರಿ ಅಲ್ಲಿ ಬಂದರೂ, ಅದಕ್ಕೆ ತಿನ್ನುವುದಕ್ಕೆ ಏನೂ ಇರಕೂಡದು' ಈ ಮಾತು ಈಗಲೂ ಅವರು ನನ್ನ ಕಿವಿಯಲ್ಲಿ ಆಗಾಗ ಬಂದು ಹೇಳಿದಂತೆಯೇ ಭಾಸವಾಗುತ್ತಿರುತ್ತೆ. ಅವರ ಆ ಮಾತು ಅಷ್ಟು ಸ್ಪಷ್ಟವಾಗಿತ್ತು. ಈ ಕ್ಷೇತ್ರದಲ್ಲಿ ಉಳಿಯಬೇಕು ಎಂದುಕೊಂಡರೆ ವಿಷಯದ ಅರಿವು ಎಷ್ಟರ ಮಟ್ಟಿಗೆ ಇರಬೇಕು ಎಂಬುದನ್ನು ಒತ್ತಿ ಎರಡೇ ವಾಕ್ಯದಲ್ಲಿ ಹೇಳಿ ಮುಗಿಸಿದ್ದರು. ವಿಷಯದ ಬಗ್ಗೆ ಅರಿವಿಲ್ಲದೆ ಬರೆಯುವ ಕೆಲಸವನ್ನು ನಾನಂದೆಯೇ ಕೈಬಿಟ್ಟೆ. ಅಲ್ಲದೆ, ಹಲವು ವಿಷಯದ ಬಗ್ಗೆ ಒಂದೇ ಸಮಯದಲ್ಲಿ ತಿಳಿದುಕೊಳ್ಳುವ ಅವಸರವನ್ನು ನಾನಂದಿನಿಂದ ಯಾವತ್ತಿಗೂ ಮಾಡಿಲ್ಲ. ಬದಲಾಗಿ ಒಂದೇ ವಿಷಯದಲ್ಲಿನ ಹಲವು ಕೋನಗಳನ್ನು ಅಭ್ಯಸಿಸುತ್ತಾ ಹೊರಟೆ. ಸತ್ಯಾಂಶವೆಂದರೆ, ನನಗಿನ್ನೂ ಒಂದು ವಿಷಯವನ್ನೇ ಪೂರ್ಣಗೊಳಿಸಲಾಗಿಲ್ಲ. ವಿಷಯದ ಆಳ ಅಗಲಗಳು ಈ ಮಟ್ಟಕ್ಕಿದೆ ಎಂದು ಮನನವಾಗಿದೆ.
ಇಷ್ಟಕ್ಕೂ ಅನಿವಾರ್ಯಕ್ಕೆ ಬಿದ್ದು, ಬರೆಯುವ ಅದೆಷ್ಟೋ ಲೇಖನಗಳು ಪೂರ್ವಾಪರ ತಿಳಿಯದೇ ಅರ್ಧಂಬರ್ಧ ಎನಿಸಿ, ಮತ್ತೊಮ್ಮೆ ಓದಿದಾಗ ಮನಸ್ಸಿಗೆ ಹಿಡಿಸದೆಯೇ ಅದನ್ನು ಅಳಿಸಿ ಹಾಕಿದ್ದುಂಟು. ಆದರೆ, ಮತ್ತೆಲ್ಲೋ ಅದರ ಬಗ್ಗೆ ಓದಿದಾಗ ಅದನ್ನು ಈ ರೀತಿ ಪೂರ್ಣಗೊಳಿಸಬಹುದಿತ್ತೇನೋ ಎಂದೂ ಅನಿಸಿದೆ. ಸಾಕಷ್ಟು ಗ್ರೌಂಡ್‍ವರ್ಕ್ ಮಾಡಿ, ಕೊಟ್ಟ ಲೇಖನಗಳು ಸಂಸ್ಥೆಯ ಮುಖ್ಯಸ್ಥರಿಗೂ ಹಿಡಿಸಿ, ಓದುಗರಿಗೂ ಇಷ್ಟವಾಗಿ ಬಹಳಷ್ಟು ಪ್ರಶಂಸೆಯ ಮಾತುಗಳು  ಕೇಳಿಬಂದಿವೆ. ಆದರೆ, ಅನಿವಾರ್ಯತೆಗೆ ಜೋತುಬಿದ್ದು ಬರೆದ ಲೇಖನಗಳು ಯಾರೂ ಗುರುತಿಸದೆಯೂ, ನಾನೇ ಅದನ್ನ ಮತ್ತೊಮ್ಮ ಓದಿದಾಗ ಢಾಳಾಗಿ ಕಂಡು ಮರುಕ ಪಟ್ಟಿದ್ದಿದೆ. ಇಷ್ಟಕ್ಕೂ ಯಾವ ಕ್ಷೇತ್ರದಲ್ಲಿ  ಕೆಲಸ ಮಾಡುತ್ತೇನೆಂದರೂ ಎಲ್ಲಕ್ಕೂ ಬೇಕಾದ್ದು ತಾಳ್ಮೆ. ಬಹಳಷ್ಟು ಸನ್ನಿವೇಶಗಳಲ್ಲಿ ಗೆಲ್ಲುವ ಅವಕಾಶವನ್ನು ಅವಸರಕ್ಕೆ ಬಿದ್ದು ಕಳೆದುಕೊಂಡಿರುತ್ತೇವೆ. ಗೆಲುವು ನಮ್ಮ ತಾಳ್ಮೆಯನ್ನು ಪ್ರತಿಕ್ಷಣ ಪರೀಕ್ಷಿಸುತ್ತಿರುತ್ತದೆ. ಸಹನೆಯಿಲ್ಲದೆ, ಪೂರ್ಣಗೊಳಿಸುವ ಧಾವಂತದಲ್ಲಿ ನಮ್ಮ ವೃತ್ತಿಬದುಕನ್ನೇ ಕ್ಷುಲ್ಲಕವಾಗಿ ಮಾಡಿಕೊಂಡಿರುತ್ತೇವೆ ನಮಗೆ ತಿಳಿಯದೆಯೇ. ಅದಾ ಮಾಡಿದರಾಯಿತು. ಇದಾ ಮಾಡಿ ಮುಗಿಸಿದರಾಯ್ತು ಬಿಡು ಎನ್ನುವ ಉಡಾಫೆ ಧೋರಣೆ ಕೆಲಸದಲ್ಲಿ ಅಬ್ಬಾ! ಅಂತೂ ಮುಗಿಸಿದೆ ಅನ್ನುವ ಸಮಾಧಾನ ನೀಡಬಹುದು.ಆದರೆ, ಆತ್ಮತೃಪ್ತಿ? ಅತ್ಯುತ್ತಮವಾಗಿ ಅಲ್ಲದಿದ್ದರೂ, ಕನಿಷ್ಟಪಕ್ಷ ಉತ್ತಮ
ವಾಗಿ ನಿಭಾಯಿಸಿz್ದÉೀನೆಂಬ ಸಾರ್ಥಕತೆ? ಉಹುಂ ದಕ್ಕುವುದೇ ಇಲ್ಲ. ಇದು ಕೇವಲ ಉದಾಹರಣೆಯಷ್ಟೆ. ಯಾವುದೇ ಕೆಲಸವಾದರೂ ಸಹನೆಯಿಂದ ವರ್ತಿಸಿದರಷ್ಟೆ ಗೆಲುವಿನ ಮೆಟ್ಟಿಲುಗಳನ್ನು ಹತ್ತುವ ಸದಾವಕಾಶ ನಮಗೆ ಲಭಿಸೀತು. ಇಲ್ಲದಿದ್ದರೆ ಇದ್ದಲ್ಲೇ ಇರಬೇಕಾಗುತ್ತದೆ ಮೂವರ ನಡುವೆ ಮತ್ತೊಬ್ಬರಾಗಿ!
ಯಾವುದೇ ಕೆಲಸದ ಆರಂಭದಲ್ಲಿ ಅಂದುಕೊಂಡದ್ದನ್ನು ಮುಗಿಸಲೋಸುಗ ಆ ಹಾದಿಯಲ್ಲೇ ಸಾಗಿ ಗೆಲುವಿನ ಶಿಖರವನ್ನತ್ತಿ, ಉತ್ತುಂಗದಲ್ಲೇ ರಾರಾಜಿಸುತ್ತಿರುವ ಅದೆಷ್ಟೋ ಸಾಧಕರ ಅನುಕರಣೆಯಲ್ಲಿ ಸಾಗುವುದು ಪುಸ್ತಕ ನೋಡಿ, ಅಡುಗೆ ಮಾಡಿ ತಿಂದಷ್ಟೆ ಸಹಜ. ಎಲ್ಲರ ಹಾದಿಯೂ ಅನುಕರಣೆಯಿಂದಲೇ ಆರಂಭವಾಗುತ್ತದೆ. ನಿಜ ಆದರೆ, ಬರಬರುತ್ತಾ ನಮ್ಮ ಆಸಕ್ತಿ  ಕ್ಷೇತ್ರದಲ್ಲಿ ನಮ್ಮದೊಂದು ಶೈಲಿ ಅಂತಹದೊಂದನ್ನು ರೂಪಿಸಿಕೊಳ್ಳದೇ ಹೋದರೆ, ಮೌಂಟ್ ಎವರೆಸ್ಟ್‍ನ್ನು ಹತ್ತುತ್ತೇನೆಂದು ಸಾಗಿ ಹಾದಿ ಮಧ್ಯದಲ್ಲಿ ಸಿಕ್ಕ ನಿಲ್ದಾಣವನ್ನೇ ಶಿಖರ ಹತ್ತಿz್ದÉೀನೆಂಬ ಭ್ರಮೆಯಲ್ಲಿ ಸಂಭ್ರಮಿಸಿದಷ್ಟೆ ಕ್ಷುಲ್ಲಕ. ಇಷ್ಟಕ್ಕೂ ಕಠಿಣ ಪರಿಶ್ರಮ ಅನ್ನೋದು ಮೆಟ್ಟಿಲುಗಳಿದ್ದಂತೆ, ಹತ್ತುವುದಕ್ಕೆ ತುಸು ಕಷ್ಟ ಎನಿಸಿದರೂ, ನಮ್ಮ ಮೇಲಿನ ಆತ್ಮವಿಶ್ವಾಸ ಹತ್ತಿಸಿಯೇ ತೀರುತ್ತೆ. ಅದೃಷ್ಟ ಅನ್ನೋದು ಲಿಫ್ಟ್ ಇದ್ದಂತೆ. ಯಾವಾಗ ಕೈ ಕೊಡುತ್ತೋ ಹೇಳಲಿಕ್ಕಾಗದು ಎಂದು ದೊಡ್ಡವರು ಸುಮ್ಮನೆ ಹೇಳಿರಲಿಕ್ಕಿಲ್ಲ ಅಲ್ಲವಾ!

- ಭಾಚಿ