ಕನ್ನಡಿ ಸುಳ್ಳು ಹೇಳಲು ಶುರುಮಾಡಿದೆ
ಮೊದಲೆಲ್ಲಾ ಹೀಗಿರಲಿಲ್ಲ,
ಹೌದು.. ಮೊದಲೆಲ್ಲಾ ಹೀಗಿರಲಿಲ್ಲ
ಇಪ್ಪತ್ನಾಲ್ಕಕ್ಕೆ ನಲವತ್ತರಂತಾಗಿದ್ದೀನಂತೆ
ಸಿಕ್ಕ ಎಲ್ಲಾ ಅವಕಾಶಗಳ ಅನವರತ
ನುಂಗಿಹಾಕಿದ ಸುಕ್ಕು ಹಿಡಿದ ಚರ್ಮ,
ಸ್ಥೂಲ, ಜಿಡ್ಡುಗಟ್ಟಿದ ಮೈಯನ್ನ
ಮತ್ತಷ್ಟು ವಿಜೃಂಭಿಸಿ ತೋರಿಸುತ್ತಿದೆ
ಕನ್ನಡಿ ಸುಳ್ಳು ಹೇಳಲು ಶುರುಮಾಡಿದೆ
ಮೊದಲೆಲ್ಲಾ ಹೀಗಿರಲಿಲ್ಲ,
ಹೌದು.. ಮೊದಲೆಲ್ಲಾ ಹೀಗಿರಲಿಲ್ಲ
ಹದಿಹರೆಯದಿಂದ ತಾಯ್ತನದವರೆಗೂ
ಹೆಣ್ಣೆಂಬ ಗರ್ವ, ಹೆಮ್ಮೆ ಮೂಡಿಸಿದ್ದ
ಸಾರ್ಥಕತೆಯ ಭಾವವನ್ನ
ನಿರರ್ಥಕವೆಂಬಂತೆ ಬಿಂಬಿಸುತಿದೆ
ಆ ಹೆಣ್ಣು ನೀನೆಯಾ? ಎಂಬ ಪ್ರಶ್ನೆ
ಮೂಡುವಂತೆ ಮಾಡಿದೆ..
ಕನ್ನಡಿ ಸುಳ್ಳು ಹೇಳಲು ಶುರುಮಾಡಿದೆ
ಮೊದಲೆಲ್ಲಾ ಹೀಗಿರಲಿಲ್ಲ,
ಹೌದು.. ಮೊದಲೆಲ್ಲಾ ಹೀಗಿರಲಿಲ್ಲ
ಲಂಗ ದಾವಣಿ ತೊಟ್ಟು ಹಿರಿ-ಹಿರಿ ಹಿಗ್ಗಿದ್ದ
ದೇಹಲ್ಲಾಗುತ್ತಿದ್ದ ಉಬ್ಬು ತಗ್ಗುಗಳ
ಅಂದವನ್ನ ನನ್ನೇ ನಾ ನಾಚುವಂತೆ ಮಾಡಿದ್ದ
ಇದೀಗ ಅಂಕುಡೊಂಕಿಲ್ಲದ ಮಾಂಸಪರ್ವತ
ಎಂದು ಅಣಕಿಸಲು ಮೊದಲು ಮಾಡಿದೆ..
ಕನ್ನಡಿ ಸುಳ್ಳು ಹೇಳಲು ಶುರುಮಾಡಿದೆ
ಮೊದಲೆಲ್ಲಾ ಹೀಗಿರಲಿಲ್ಲ,
ಹೌದು.. ಮೊದಲೆಲ್ಲಾ ಹೀಗಿರಲಿಲ್ಲ
ಪ್ರತಿ ಉಡುಪಿಗೂ, ಒನಪು ವಯ್ಯಾರಕ್ಕೂ
ನಿನ್ನಂದ ಚೆಂದವೇ ಕಾರಣ ಎನ್ನುತ್ತಿದ್ದ ಕನ್ನಡಿ
ಹೀಗೀಗಾ ಚೆಂದವೇ ಇಲ್ಲದಂತೆ ತೋರುತಿದೆ
ಕನ್ನಡಿ ಸುಳ್ಳು ಹೇಳಲು ಶುರುಮಾಡಿದೆ
ಮೊದಲೆಲ್ಲಾ ಹೀಗಿರಲಿಲ್ಲ,
ಹೌದು.. ಮೊದಲೆಲ್ಲಾ ಹೀಗಿರಲೇ ಇಲ್ಲ..;
-ಭಾಚಿ
|
Wednesday, 1 July 2015
Subscribe to:
Post Comments (Atom)
No comments:
Post a Comment