ಅಂದ್ಯಾಕೋ ಮನೆ ಸಂಪೂರ್ಣ ನಿಶ್ಯಬ್ದವಾಗಿತ್ತು... ಮನಸ್ಸು ಕೂಡ! ಏನೂ ಮಾಡ್ಬೇಕು ಅಂತ ಅನಿಸಲಿಲ್ಲ. ಹಾಗಾಗಿಯೇ ಬಹಳ ದಿನಗಳ ನಂತರ ಟಿವಿ ಮುಂದೆ ಕೂತೆ. ‘ಅಮ್ಮಾ... ಚಿಂಟು, ಪೋಗೋ ಹಾಕು’ ಅನ್ನೋಕೆ ಮಗರಾಯ ಮನೆಯಲ್ಲಿರಲಿಲ್ಲ. ಸಂಜೆಯಾಗಿದ್ದರಿಂದ ಹೊರಹೋಗುವ ಮನಸ್ಸಾಗಲಿಲ್ಲ. ಟಿವಿ ಆನ್-ಆ- ಉಸಾಬರಿ ವಹಿಸಿದ್ದ ನಮ್ಮನೆಯ ಖುಷಿಯ ಉಪಸ್ಥಿತಿ ಕಾಡುತ್ತಲೇ ಇತ್ತು. ಅಂತೂ ಅದೆಷ್ಟೋ ದಿನಗಳ ತರುವಾಯ ನಾನಾಗಿಯೇ ಟಿವಿ ಆನ್ ಮಾಡಿದೆ. ಟಿವಿಯನ್ನೇನೋ ಆನ್ ಮಾಡಿದೆ. ಆದರೆ ಯಾವ ಅಡಿಕ್ಷನ್‌ಗೂ ಒಳಗಾಗದ ನಾನು ಏನು ನೋಡೋದು? ನ್ಯೂಸ್...? ಸೀರಿಯಲ್? ಸಿನಿಮಾ...? ಗೊಂದಲಕ್ಕೆ ಬಿದ್ದು ಅದೆಷ್ಟೇ ಚಾನೆಲ್ ಬದಲಾಯಿಸಿದರೂ ಮನಸ್ಸು ಯಾವುದನ್ನು ನೋಡುವುದಕ್ಕೂ ಒಪ್ಪಲಿಲ್ಲ. ಕೊನೆಗೂ ಹದಿನೈದು ನಿಮಿಷ ಶತಾಯಗತಾಯ ಸರ್ಕಸ್ ನಡೆಸಿದ ಬಳಿಕ ಅದ್ಯಾರೋ ಯಾರಿಗೋ ಕಪಾಳಕ್ಕೆ ಹೊಡೆಯುವ ದೃಶ್ಯ ಕಣ್ಣಿಗೆ ಬಿತ್ತು ಅಷ್ಟೇ. ಅಚಾನಕ್ಕಾಗಿ ಬೆರಳು ಚಾನೆಲ್ ಬದಲಾಯಿಸುವುದನ್ನು ಸಂಪೂರ್ಣ ಬಂದ್ ಮಾಡಿತು. ಹೊಡೆದದ್ದು ಹೀರೋ, ಹೊಡೆಸಿಕೊಂಡದ್ದು ಮಾತ್ರ ಹೀರೋಯಿನ್ ಅಲ್ಲ. ಮತ್ಯಾರು? ಅವಳು ಗರ್ಲ್ - ಫ್ರೆಂಡಾ..! ಅಲ್ಲ. ಮತ್ಯಾರು ಎಂಬ ಕುತೂಹಲದಲ್ಲೇ ಇಡೀ ಸಿನಿಮಾ ನೋಡುವ ಹಾಗಾಯ್ತು. ಅದು ದೊಡ್ಡ ಬ್ಯಾನರ್‌ನ ಅಡಿಯಲ್ಲಿ ಬಂದ ಹೊಸ ನಾಯಕನ ಹೊಸ ಸಿನಿಮಾ. ಸಿನಿಮಾ ಯೂಥ್ ಓರಿಯೆಂಟೆಡ್ ಅನಿಸಿದರೂ, ಈಗಿನ ಯುವಮನಸ್ಸುಗಳು ಭಾವನೆಗಳೊಟ್ಟಿಗೆ ಹೇಗೆಲ್ಲ ಯೋಚಿಸುತ್ತವೆ ಎಂಬುದರ ವಿವರಣೆ ಅಲ್ಲಿ ಅನಾವರಣಗೊಂಡಿತ್ತು. ನಾಯಕ ಸಿಕ್ಕಾಪಟ್ಟೆ ದಿಲ್ದಾರ್ ಹುಡುಗ. ಎಲ್ಲವನ್ನೂ ಪಾಸಿಟಿವ್ ಆಗಿ ತಗೊಂಡು ನಿಭಾಯಿಸುವ ಕ್ಯಾರೆಕ್ಟರ್. ಅಲ್ಲದೆ ಗಿಟಾರಿಸ್ಟ್. ಮ್ಯೂಸಿಕ್‌ನಲ್ಲೇ ಮಂತ್ರಮುಗ್ಧರನ್ನಾಗಿಸಿ, ಅವನೊಂದಿಗಿದ್ದ ಯಾರಿಗೂ ಬೋರ್ ಅನಿಸುವುದಕ್ಕೆ ಬಿಡದೆ ಇರುವಂಥವನು.ಸಂಗೀತಸ್ಪರ್ಧೆಗಾಗಿ ಗೋವಾಕ್ಕೆ ಹೋಗುತ್ತಿದ್ದಾಗ ನಾಯಕನಿಗೆ ಪರಿಚಯವಾದ ಹುಡುಗಿ ಆಕೆ. ಅವಳಿಗೂ ಈ ಮೊದಲೇ ಒಬ್ಬ ಬಾಯ್-ಫ್ರೆಂಡ್ ಇರುತ್ತಾನೆ. ಅವಳ ಚೆಲ್ಲುಚೆಲ್ಲು ವರ್ತನೆ ಸಹಿಸದೆ ಬ್ರೇಕ್ ಅಪ್ ಆಗಿದ್ದ. ಅದಕ್ಕೆ ಅವಳು ವಿಷ ಕುಡಿದು ಸಾಯೋಕೆ ಹೋಗುತ್ತಾಳೆ. ಅದನ್ನು ನೋಡಿದ ನಾಯಕ ಮತ್ತವರ ಗ್ಯಾಂಗ್ ಅವಳಿಗೆ ಸಮಾಧಾನ ಹೇಳಿ, ಕರೆತಂದು ಅವನು ಮತ್ತೆ ಒಪ್ಪಿಕೊಳ್ಳುವ ಹಾಗೆ ಮಾಡ್ತೀವಿ ಅಂತ್ಹೇಳಿ, ‘ಬ್ರೇಕ್ ಅಪ್ ಪಾರ್ಟಿ’ ಪ್ಲಾನ್ ಮಾಡುತ್ತಾರೆ.
ಕೊನೆಗೆ ಅವರು ಅಂದುಕೊಂಡ ಹಾಗೆ ಅವಳ ಬಾಯ್-ಫ್ರೆಂಡ್‌ಗೆ eನೋದಯವಾಗಿ, ‘ನೀನಿಲ್ದೆ ನಾನಿರೋಲ್ಲ ಮತ್ತೆ ಒಂದಾಗೋಣ’ ಎನ್ನುತ್ತಾನೆ. ಆದರೆ ಅವಳು ‘ನೋ...’ ಅಂತ ಹೇಳಿ ಅಲ್ಲಿಂದ ಖುಷಿಯಿಂದಲೇ ಹೊರಟುಬಿಡುತ್ತಾಳೆ. ಅವಳ ಹಿಂದೆಯೇ ಹೋಗುವ ನಾಯಕ, ‘ನಾವು ಪ್ಲಾನ್ ಮಾಡಿದ್ದು ಇದಕ್ಕೆ ತಾನೆ? ಅವನು ಒಪ್ಪಿಕೊಂಡ ಮೇಲೂ ನೀನ್ಯಾಕೆ ಬೇಡ ಎಂದಿದ್ದು?’ ಅಂತ ಪ್ರಶ್ನಿಸ್ತಾನೆ. ಆದರೆ, ಆಕೆ ಕೊಡುವ ಉತ್ತರ, ‘ಯಾವತ್ತೂ ನನ್ನನ್ನು ಅವನು ಬೇಡ ಅನ್ಬಾರ್ದು. ಅದನ್ನ ನಾನ್ಹೇಳಿದ್ರೇನೆ, ನಾನು ಬ್ರೇಕ್ ಅಪ್ ಮಾಡಿಕೊಂಡ್ರೇನೆ ನನಗೆ ಖುಷಿ’ ಅಂದುಬಿಡ್ತಾಳೆ. ಅಷ್ಟಕ್ಕೇ ಅವನಿಗೆ ರೇಗಿಹೋಗಿ ಕಪಾಳಕ್ಕೆ ಬಾರಿಸುತ್ತಾನೆ. ಅದಾದ್ಮೇಲೆ ಕಥೆ ಏನೋ ಮುಂದುವರೀತು. ಆದ್ರೆ ನನ್ನ ಮನಸ್ಸು ಮಾತ್ರ ಅಲ್ಲೇ ಫ್ರೀಜ್ ಆಗಿಹೋಯ್ತು. ಇಷ್ಟಕ್ಕೂ ಮನಃಸ್ಥಿತಿಗಳು ಯಾಕೆ ಕ್ಷಣಕ್ಕೊಮ್ಮೆ ಬದಲಾಗುತ್ತವೆ? ಆಧುನಿಕ ಜೀವನವು, ಯಾರಿಲ್ಲದಿದ್ದರೂ ನಿರ್ದಿಷ್ಟ ಆದಾಯವಿದ್ದರೆ ಬದುಕು ನಡೆಸಬಹುದು ಎಂಬ ವಾತಾವರಣ ಸೃಷ್ಟಿಸಿರುವುದು ನಿಜ. ಆದರೆ, ಬಂಧಗಳಿಲ್ಲದೆ ಬದುಕು ಬರಿದು ಅನ್ನೊದೂ ಅಷ್ಟೇ ನಿಜ. ಎಲ್ಲ ಸಂಬಂಧಗಳು ಪ್ರತಿಷ್ಠೆಯ ಮೇಲಾಟದಲ್ಲೇ ಪ್ರಸ್ತುತವಾಗುತ್ತಿದ್ದರೆ ಯಾವ ಸಂಬಂಧ ಉಳಿದೀತು? ತಲೆಯಲ್ಲಿ ಅಚಾನಕ್ಕಾಗಿ ಇಂತಹದ್ದೊಂದು ಪ್ರಶ್ನೆ ಭುಗಿಲೆದ್ದಿತ್ತು.ವ್ಯವಹಾರಗಳಲ್ಲಿ ಅನಿರೀಕ್ಷಿತವಾಗಿ ಆಗುವ ಬದಲಾವಣೆಗಳಿಗೇನೋ ಕುಟುಂಬದ, ಸ್ನೇಹಿತರ ಬೆಂಬಲ, ಸಾಂತ್ವನ ಸಿಗುತ್ತದೆ. ಒಂದಿಷ್ಟು ಸ್ವಯಂ ಯೋಜನೆಗಳು ಅದನ್ನ ಸರಿದೂಗುವಂತೆ ಮಾಡಿಬಿಡುತ್ತವೆ. ಆದರೆ ಮನಸ್ಸಿನ ಸ್ಥಿಮಿತ ಇಲ್ಲದೆ, ಸ್ಪಷ್ಟತೆ ಇಲ್ಲದೆ ಟೈಂಪಾಸ್‌ಗೆ ನಾವಾಗಿಯೇ ಮಾಡಿಕೊಳ್ಳುವ ಪ್ರೀತಿ -ಪ್ರೇಮಗಳಂಥ ಸಂಬಂಧಗಳು ಮಾನಸಿಕ ಸ್ವಾಸ್ಥ್ಯವನ್ನು ಹೇಗೆ ಹದಗೆಡಿಸಬಲ್ಲದು ಎಂಬುದಕ್ಕೆ ಸಾಕ್ಷಿ ಈ ಸಿನಿಮಾ. ಎಲ್ಲದಕ್ಕೂ ಅನುಕೂಲ ಮಾಡಿಕೊಡುವ ಕುಟುಂಬ, ಯಾವುದಕ್ಕೂ ಪರದಾಡುವ ಸ್ಥಿತಿಯನ್ನು ತಂದೊಡ್ಡದು. ಅಂಥ ಸಂದರ್ಭಗಳಲ್ಲಿ ಉಂಟಾಗುವುದೇ ಇಂಥ ಟೈಂಪಾಸ್ ಪ್ರೀತಿ-ಪ್ರೇಮ. ಪ್ರೀತಿಸಿದರೆ ಪರಸ್ಪರ ಪ್ರೇಮ ನಿವೇದನೆಗೆ ಪೈಪೋಟಿ. ಕಳಚಿಬಿದ್ದರೆ ಅದರಲ್ಲೂ, ತಾನೇ ಮೊದಲು ಬ್ರೇಕ್ ಅಪ್ ಆಗ್ಬೇಕು, ತಾನೇ ಮೊದಲಾಗಬೇಕು ಎಂಬ ಸ್ಪರ್ಧೆ. ತಿರಸ್ಕಾರವೇ ಇಲ್ಲಿ ಬಹು ಮುಖ್ಯ ಎಂದಾದಮೇಲೆ ನಿಜಕ್ಕೂ ಈ ಮನಸ್ಸುಗಳು ಪ್ರೀತಿಸಿದ್ದವಾ? ಅಥವಾ ತನ್ನನ್ನು ಆರಾಧಿಸುವ ಮನಸ್ಸನ್ನು ತಾನೂ ಆರಾಧಿಸಬೇಕೆ ಎಂಬುದಕ್ಕಿಂತಲೂ, ತಾನೇ ಅವನನ್ನು ತಿರಸ್ಕರಿಸಿದರೆ ಹೇಗೆಂಬ ಪ್ರತಿಕ್ರಿಯೆಯೇ ಪ್ರೀತಿಯ ಮುಖವಾಡ ತೊಟ್ಟಿತ್ತಾ?! ಈ ಎಲ್ಲ ಗೊಂದಲಗಳಿಗೂ ಉತ್ತರ ಮಾತ್ರ ಸಿಗದೆ ಚಿತ್ರ ಮುಗಿದಿತ್ತು.ಕಥೆ ಚಿತ್ರದ್ದೇ ಆದರೂ, ಚಿತ್ರಿತವಾಗಿದ್ದು ನೈಜ ಘಟನೆಗಳೇ. ಈಗಿನ ಯುವ ಮನಸ್ಸುಗಳ ತುಡಿತ ಇಷ್ಟೇ. ಎಲ್ಲರೂ ತನ್ನತ್ತ ನೋಡುವ ಹಾಗೆ ತನ್ನನ್ನು ಅನಾವರಣ ಮಾಡಬೇಕು, ಎಲ್ಲರೂ ತನ್ನ ಪ್ರೀತಿಸ್ಬೇಕು ಅಂತ. ತಾನು ಮಾತ್ರ ಯಾರೊಬ್ಬರನ್ನೂ ಅದೇ ಬಗೆಯ ಮನಃಸ್ಥಿತಿಯಲ್ಲಿ ಪ್ರೀತಿಸಲು ಮುಂದಾಗೋದೇ ಇಲ್ಲ. ತಿರಸ್ಕಾರದಲ್ಲಿ ಮಾತ್ರ ಮನಸ್ಸು ಪ್ರತಿಕ್ರಿಯಿಸಲು ಮೊದಲು ಮಾಡುತ್ತದೆ ಎಂಬುದೇ ಬಹು ದೊಡ್ಡ ದುರಂತ. ಒಬ್ಬರನ್ನು ತಿರಸ್ಕರಿಸುವುದು ದೊಡ್ಡ ವಿಷಯ ಅಲ್ಲ. ಹುಟ್ಟುತ್ತಲೇ ಜತೆಗಂಟಿಕೊಂಡ ಸಂಬಂಧಗಳೋ, ನಾವಾಗಿಯೇ ಮಾಡಿಕೊಂಡ ಸಂಬಂಧಗಳೋ ಆದರೆ ಅವುಗಳನ್ನು ಉಳಿಸಿಕೊಳ್ಳುವಲ್ಲೇ ಇರುವುದು ನಿಜವಾದ ಗೆಲುವು... ಅಲ್ವಾ?