Thursday, 10 December 2015

ನಾನು ಯಾರು?




ವಿಶ್ವದ ರಂಗಸ್ಥಳದ ಮೇಲೆ ಹುಸಿಕಾಳಗ ಶುರುವಾಗಿದೆ
ಯುದ್ಧದಲ್ಲಿ ಎಲ್ಲರು ಜಟ್ಟಿಗಳೇ, ಫೈಲ್ವಾನರೇ, ಮಹಾನ್‍ಮಲ್ಲರೇ,
ವೀಕ್ಷಣೆಗೆ ಕುಳಿತ ನಾನಲ್ಲಿ ನಿರವಿಸಲು ಹೋದರೆ 
ಎಲ್ಲರೂ ಪ್ರಶ್ನಿಸುತ್ತಿದ್ದಾರೆ ನೀನು ಯಾರು?

ಹೆಸರ ಹೇಳಿ ಪರಿಚಯಿಸಿಕೊಂಡೆ ಅವರ್ಯಾರಿಗೂ ನಾನು ಗೊತ್ತಿಲ್ಲ
ಅರೆಕ್ಷಣ ಪೆಚ್ಚಾಗಿ, ಕಾಳಗದಲ್ಲಿ ತಗುಲಿಹಾಕಿದ್ದ ನಿಲುಗನ್ನಡಿಯ ಮುಂದೆ ನಿಂತು
ನನ್ನೇ ನಾನು ಕೇಳಿಕೊಂಡೆ ನನ್ನ ಹೆಸರೇ ಗೊತ್ತಿರದ ಇವರ ಮುಂದೆ
ನಾನ್ಯಾರೆಂದು ಹೇಳಲಿ? ಹೌದು, ನಾನು ಯಾರು?
ಅಪ್ಪ-ಅಮ್ಮನ ಮಗಳ, ಗಂಡನಾ ಹೆಂಡತಿಯಾ? ಅತ್ತೆಯ ಸೊಸೆಯಾ?
ಆ ಮಗುವಿನ ತಾಯಿಯಾ? ಬೆನ್ನಿಗೆ ಬಿದ್ದವರ ಸಹೋದರಿಯಾ?
ಆ ಭಾವುಕರ ನಡುವಿನ ಗೆಳತಿಯಾ? ಇಲ್ಲ ಕಾರಣ ಹೇಳದೇ
ಬಿಟ್ಟು ಹೋದ ಆ ಹಳೇ ಪ್ರಿಯಕರನ ಮನದನ್ನೆಯ? 
ಇಷ್ಟಕ್ಕೂ ನಾನೇನೆಂದು ಉತ್ತರಿಸಲಿ ಬದುಕಿನ ಅಷ್ಟು ಪಾತ್ರಗಳಲ್ಲಿ 
ನಾನ್ಯಾರೆಂಬುದನ್ನ ಇವರಿಗೆ ವಿವರಿಸಿ ಹೇಳಿಲಿ,
ಹಾಗಾದರೆ, ನಿಜಕ್ಕೂ ನಾನು ಯಾರು?

ಕಾಳಗ ತನ್ನ ಪಾಡಿಗೆ ತಾನು ಮುಂದುವರಿದೇ ಇತ್ತು ನನ್ನನ್ನು ಬದಿಗೊತ್ತಿಸಿ
ನಾನು ನೋಡುತ್ತಲೇ ನಿಂತೆ. ಸಹಜ ರೀತಿಯಲ್ಲೇ
ಅಲ್ಲೆಲ್ಲರೂ ಗೆಲ್ಲುವ ಉತ್ಸಾಹಿಗಳೇ, ಎಲ್ಲರೂ ಶಕ್ತಿವಂತರೇ
ವಿಜಯ ಸಾಧಿಸುವ ಹಪಹಪಿಕೆಯಲ್ಲಿ ನೋಡನೋಡುತ್ತಲೇ ಯುದ್ಧಕ್ಕೆ ನಿಂತ ಜಟ್ಟಿಗಳು
ಮಾತು ಮಾತಲ್ಲೇ ನಿರ್ವಾಣರಾಗುತ್ತಾ ನಿಂತರು.
ಬದುಕು ಅವರನ್ನು ತಂದು ನನ್ನ ಪಕ್ಕಕ್ಕೆ ನಿಲ್ಲಿಸಿತ್ತು
ಇನ್ನೊಂದಷ್ಟು ಮಂದಿ ಶೂನ್ಯಭಾವ ಹೊತ್ತು ಬದಿಗೆ ಸರಿದರು
ಮತ್ತೊಂದಷ್ಟು ಮಂದಿ ಕೆಸರೆರಚಿಕೊಂಡು ತಮ್ಮ ಸಾಮರ್ಥ್ಯ ಮರೆತು
ತಮ್ಮ ಮುಂದೆ ತಾವೇ ಬೆತ್ತಲಾದರು.
ಮಗದೊಂದಿಷ್ಟು ಮಂದಿ ಪ್ರಶ್ನಿಸುತ್ತಲೇ ಜೀವ ತೆತ್ತರು
ಒಂದಷ್ಟು ಮಂದಿ ಹೆಸರೇ ಇಲ್ಲದಂತೆ ನಿರ್ನಾಮವಾಗಿ ಹೋದರು
ಆದರೇ ನಾನು ಅಲ್ಲಿಯೇ ಉಳಿದಿz್ದÉೀ...
ಪ್ರಶ್ನೆ ನನ್ನನ್ನು ಕಾಡುತ್ತಲೇ ಇತ್ತು. ನಾನು ಯಾರು?

ಅಷ್ಟುಕ್ಕೂ ಕಾಳಗದಲ್ಲಿ ಗೆದ್ದವರಿಗೆ ಬದುಕು ಸಿಗುವುದರಲ್ಲಿತ್ತು
ಆದರೆ ಸೋತ ಎಲ್ಲರನ್ನು ನೋಡಿ ಬದುಕು ಮೈಕೊಡವಿ ನಿಂತಿತ್ತು
ಯಾರ ಕೈಗೂ ದಕ್ಕದೇ `ಬದುಕು' ಅಗ್ರಸ್ಥಾನದಲ್ಲಿ ಮೆರೆಯುತ್ತಿತ್ತು
ಬದುಕು ನಿಜಕ್ಕೂ ಬೀಗುತ್ತಿತ್ತು. ಮಹಾನ್ ಮಹಾನ್ ಮಲ್ಲರ  ಕೈಗೆ ಸಿಗದೇ,
ಪೆಚ್ಚು ಮೋರೆ ಹೊತ್ತ ನಾನು ಅಸಹಾಯಕಳತೆಯಿಂದ ಬದುಕ ಮುಂದೆ 
ನಿಂತು ಪ್ರಶ್ನಿಸಿದೆ. ನೀನಾದರೂ ಹೇಳು ನಾನು ಯಾರು?

ಅಸ್ತಿತ್ವವೇ ಇರದ ನಿನ್ನನ್ನು ಹರಾಜಿಗಿಡುತ್ತೇನೆ. ಆಗಲಾದರೂ ವಾರಸುದಾರ ಸಿಕ್ಕಾನು
ಆಗ ನೀನು ಯಾರೆಂದು ಎಲ್ಲರಿಗೂ ತಿಳಿಯುತ್ತದೆ ಎಂದಿತು ಬದುಕು
ಅದಕ್ಕೆ ನಾನು ಒಪ್ಪಿದೆ. ಹರಾಜು ನಡೆಯಿತು. ಅಲ್ಲೂ ನನಗೆ ನಿರಾಸೆ ಕಾದಿತ್ತು
ಕೊಳ್ಳಲು ಬಂದವರದ್ದು ಅದೇ ಪ್ರಶ್ನೆ ನೀನು ಯಾರು?

ಬದುಕು ನನ್ನ ಮೇಲೆ ನಿರುತ್ಸಾಹ ತೋರಿ ಮಾರ್ಗ ಬದಲಾಯಿಸಿ ತನ್ನ ಪಾಡಿಗೆ
ತಾನು ಕಾಳಗ ಮುಗಿಸಿ ತೆರಳಿತು, ನನ್ನ ಪ್ರಶ್ನೆಗೆ ಉತ್ತರಿಸಲಾಗಿದೆ,
ಅಲ್ಲಿದ್ದವರಿಗೆ ನಿರ್ವಿವಾದವಾಗಿ ಉಸುರಬೇಕಿದ್ದ ನಾನೂ ಅಲ್ಲಿಂದ ಹೊರಟೆ 
ಬದುಕಿನೊಂದಿಗೆ ಬದುಕ ಸಾಗಿಸುತ್ತಾ...
ಈಗೆಲ್ಲರ ಬಾಯಿಯೂ ಮುಚ್ಚಿದೆ ನೀನು ಯಾರು ಎಂಬ ಪ್ರಶ್ನೆ ಬಾರದೇ
ಕಾರಣ ನನಗೇ ನಾನಾರೆಂಬ ಪ್ರಶ್ನೆ ಬೇಡ, ಯಾರೆನೆನ್ನುತ್ತಾರೆನ್ನುವ ಗೌಜಲು ಬೇಡ
ನಾನೊಬ್ಬಳು ಸಾಮಾನ್ಯ ಸ್ತ್ರೀ ಅಷ್ಟೆ....!


-ಭಾಚಿ 


No comments:

Post a Comment