Thursday 28 January 2016

ಪಶ್ಚಾತ್ತಾಪದ ನಿಟ್ಟುಸಿರು ಅವನಿಗೆ ಮಾತ್ರನಾ?

ಬಿ ಪ್ರಾಕ್ಟಿಕಲ್ ಅನ್ನೋ ಹುಡುಗಿ. ನಾಳೆಯ ಬಗ್ಗೆ ಚಿಂತಿಸಿ ಗುಣಿಸಿ, ಭಾಗಿಸಿ, ಲೆಕ್ಕಾಚಾರ ಹಾಕಿಯೇ ಮುಂದಿಡಿಯಿಡುವ ಹುಡುಗ. ಇಬ್ಬರಿಗೂ ಎತ್ತಣದಿಂತ್ತೆಣ ಸಾಮೀಪ್ಯ. ಆದರೂ ಅದಮ್ಯವಾಗಿ ಪ್ರೀತಿಸಿದ್ರು, ದೂರನೂ ಆಗ್ಬಿಟ್ರು. ಅಯ್ಯೋ, ಹೀಗದೆಲ್ಲಾ ಕಾಮನ್ ಆಗ್ಬಿಟ್ಟಿದೆ ಬಿಡಿ. ಇವತ್ತು ಇವರ ಜತೇಲಿದ್ದವರು ನಾಳೆ ಇನ್ನೊಬ್ಬರ ಜತೆ ಗುರುತಿಸ್ಕೋತಾರೆ ಅನ್ನುವವರ ಮಧ್ಯೆ, ಕಳೆದ ಎರಡು ವರ್ಷಗಳಿಂದಲೂ ಇಬ್ಬರು ಖಾಸಾ ಒಂಟಿಯಾಗಿಯೇ ಉಳಿದಿದ್ದಾರೆ. ಪರಸ್ಪರರಿಬ್ಬರೂ ವಿರುದ್ಧ ದಿಕ್ಕುಗಳು ಅನ್ನೋದೆನೋ ನಿಜ. ಆದರೆ ಅಷ್ಟು ಗಾಢವಾಗಿ ಹಗಲು ರಾತ್ರಿಗಳ ಪರಿವೆಯೇ ಇಲ್ಲದೆ ಪ್ರೀತಿಸಿದ್ದವರು ಹೀಗ್ಯಾಕಾದ್ರೂ? ಅವರೇನು ಟೀನೇಜ್ ಲವರ್ಸ್ ಅಲ್ಲ. ಪ್ರೀತಿ ಹುಟ್ಟಿದ್ದು, ಕಾಲೇಜಿನಲ್ಲೋ, ಕೆಲಸ ಮಾಡುವ ಸ್ಥಳದಲ್ಲೋ ಅಲ್ಲ. ಇಬ್ಬರು ಪ್ರಬುದ್ಧರು, ಜವಾಬ್ದಾರಿಗಳ ಮೂಟೆಯನ್ನು ಹೆಗಲ ಮೇಲಿರಿಸಿಕೊಂಡೇ ಸಾಂಗತ್ಯಕ್ಕೆ ಕೈ ಚಾಚಿ ನಿಂತವರು. ಪರಸ್ಪರರಿಬ್ಬರಿಗೂ ತಮ್ಮ ಅಭಿರುಚಿ, ನಿರ್ಧಾರಗಳ ಬಗ್ಗೆ ಗೌರವವಿದ್ದೆ ಪ್ರೀತಿಗೆ ಅನುಮತಿ ನೀಡಿದ್ದರು. ಆದರೂ, ಇದ್ದಕ್ಕಿದ್ದ ಹಾಗೇ ಒಂದು ದಿನ ಇಬ್ಬರೂ ಪರಿಚಯವೇ ಇಲ್ಲದವರಂತೆ ಉಳಿದುಬಿಟ್ಟರು. ಬೇರಾಗಿದ್ದು ಒಂದೇ ಮಾತಿಗೆ. ಯಾವುದೋ ಕ್ಷುಲ್ಲಕ ಕಾರಣಕ್ಕೆ ಅವಳದಲ್ಲದ ತಪ್ಪಿಗೆ ಆತ ನೀನು ನನಗೆ ಸಿಗಬಾರದಿತ್ತು. ಅಂದು ನೀನು ನನಗೆ ಸಿಗದೇ ಇದ್ದಿದ್ದರೇ ನನ್ನ ಬದುಕಿನಲ್ಲಿ ಹೀಗೆಲ್ಲಾ ಆಗ್ತಾ ಇರಲಿಲ್ಲ ಎಂದಿದ್ದ. ಅಷ್ಟೇ! ಅವನೆಡೆಗಿನ ಪ್ರೀತಿ ತೊರೆದು, ಆಕೆ ಶಾಶ್ವತ ಮೌನಕ್ಕೆ ಶರಣಾಗಿದ್ದಳು.
ಅವಳೇನು ಅಂತ ಮಾಡಬಾರದ ತಪ್ಪನ್ನೇನೂ ಮಾಡಿರಲಿಲ್ಲ. ಇಬ್ಬರೂ ತಮ್ಮ ಪಾಡಿಗೆ ತಾವು ಅವರವರ ಕೆಲಸಗಳಲ್ಲಿ ಮುಳುಗಿದ್ದರೂ, ಸಿಗುವ ಅಲ್ಪ ಘಳಿಗೆಯಲ್ಲಿ ಅವನ ಸಾಮೀಪ್ಯ, ಒಡನಾಟ ಬಯಸಿದ್ದಳು. ಎಲ್ಲವನ್ನು, ಎಲ್ಲರನ್ನು ತೊರೆದು ಬದುಕುತ್ತಿರುವಾಕೆ. ಬದುಕು ಆಕೆಗೆ ಪ್ರಾಕ್ಟಿಕಲ್ ಆಗಿರುವುದನ್ನ ರಕ್ತಗತವಾಗಿಯೇ ಕಲಿಸಿದೆ ಎನ್ನುವಷ್ಟರ ಮಟ್ಟಿಗೆ ಹೊರಜಗತ್ತಿಗೆ ಪ್ರಾಕ್ಟಿಕಲ್ ಹೌದು. ಆದರೆ, ಒಳಮನಸ್ಸೊಂದು ಭಾವನೆಗಳ ತುಡಿತಕ್ಕೆ ಅವನ ಸಾಂಗತ್ಯ ಯಾವಾಗಲೂ ಅಲ್ಲದಿದ್ದರೂ, ಸಮಯ ಸಿಕ್ಕಾಗಲೆಲ್ಲಾ ಬೇಡುತ್ತಲೇ ಇತ್ತು. ಆದರೆ, ಆತನಿಗೆ ಯಾವುದರಲ್ಲೂ ಆಸಕ್ತಿಯಿಲ್ಲ. ಅರ್ಥಾತ್ ಅವಳ ಮೇಲೂ...! ಮಾತೆತ್ತಿದರೆ ನೀನಂದು ನನಗೆ ಸಿಗಬಾರದಿತ್ತು. ಬದುಕಲ್ಲಿ ನೀ ಬಂದು ಅದೇನೆಲ್ಲಾ ಆಗಿ ಹೋಯ್ತು ಅನ್ನುವ ಮಂತ್ರ ಪಠಣ ಮಾಡುತ್ತಿರುತ್ತಾನೆ.


**
ಒಂದು ವರ್ಷದ ಹಿಂದಿನ ಮಾತು. ಆ ಹುಡುಗ-ಹುಡುಗಿ ನಾವಿಬ್ರೂ ಪಕ್ಕ ದೋಸ್ತ್‍ಗಳು ಅಂತ ಹೇಳ್ಕೊಂಡೇ ಓಡಾಡ್ಕೋಡಿಂದ್ರು. ಆದರೆ, ಇಬ್ಬರು ಪ್ರೀತಿಸ್ತಿದ್ದಾರೆ ಅಂಥ ಜಗತ್ತಿಗೆ ಗೊತ್ತಿತ್ತು. ಅದು ಅಕ್ಷರಶಃ ನಿಜವೂ ಆಗಿತ್ತು. ಒಂದಿನ ಇಬ್ರೂ ರಿಜಿಸ್ಟ್ರಾರ್ ಮದುವೆ ಆದ್ರೂ ಅಂತ ಕೇಳ್ಪಟ್ಟೆ. ಅದಾದ ಸರಿಸುಮಾರು 5-6 ತಿಂಗಳಾಗಿತ್ತೇನೋ ಆಗಲೇ ಡಿವೋರ್ಸ್‍ಗಾಗಿ ಆ ಹುಡುಗ ಓಡಾಡ್ತಿದ್ದಾನೆ ಅನ್ನೋ ವಿಷಯ ಗೊತ್ತಾಯ್ತು. ಅಷ್ಟೆಲ್ಲಾ ಗಾಢವಾಗಿ ಪ್ರೀತ್ಸಿ, ಪರಸ್ಪರರಿಬ್ಬರು ಅಭಿರುಚಿಗಳ ಬಗ್ಗೆ ಅರ್ಥ ಮಾಡಿಕೊಂಡು ಮದುವೆ ಆಗಿ ಯಾಕಿಗಾದ್ರೂ ಅಂದ್ರೆ, ಮನೆಯವರು ಅವಳಿಗಿಂತ ಚೆಂದದ, ಶ್ರೀಮಂತ ಮನೆಯ ಹುಡುಗಿಯನ್ನು ಮದುವೆ ಮಾಡೋಕೆ ನಿಶ್ಚಯಿಸಿದ್ದರಂತೆ. ಆ ಕಡೆ ಮನವೊಲಿದು, ಈಕೆಗೆ ನೀನು ಸಿಗದೇ ಹೋಗಿದ್ರೆ, ನಾನು ಆ ಹುಡುಗೀನಾ ಮದ್ವೆ ಆಗಿ ಲೈಫ್ ಸೆಟ್ಲ್ ಮಾಡ್ಕೊತ್ತಿದ್ದೆ ಅಂತಾ ಇದ್ದನಂತೆ. ಅಷ್ಟಕ್ಕೆ ರೋಸಿ ಹೋಗಿ ಡಿವೋರ್ಸ್‍ಗೆ ಸಮ್ಮತಿಸಿದ್ದಾಳೆ. ಆಕೆ ಮನೆಯಲ್ಲಿಯೂ ಯಾವುದಕ್ಕೂ ಕಡಿಮೆಯಿರಲಿಲ್ಲ. ಒಪ್ಪಿದ್ದರೆ ಅವನಿಗಿಂತ ಚೆಂದದ ಹುಡುಗನ್ನ ನೋಡಿ ಮದ್ವೆ ಮಾಡ್ತಿದ್ದ್ರು. ಆದ್ರೆ ಆಕೆ ಯಾವತ್ತಿಗೂ ಆ ಬಗ್ಗೆ ಅಪ್ಪಿತಪ್ಪಿಯೂ ಸೊಲ್ಲೆತ್ತದವಳಲ್ಲ. ಮನೆಯವರ ವಿರೋಧದ ನಡುವೆಯೂ ಮದುವೆ ಆಗಿ ಬಂದಿದ್ದೀವಿ. ಇಬ್ಬರೂ ಚೆನ್ನಾಗಿ ಬದುಕಿ ತೋರಿಸೋಣ ಎನ್ನುವ ಉವಾಚ ಅವಳದು. ಅವನು   ಈಗ ಅವಳ ಯಾವ ಮಾತು ಕೇಳೋಕು ಅವನು ಕಿವುಡನಾಗಿಬಿಟ್ಟಿದ್ದಾನೆ. ಇತ್ತ ಕಡೆ ತವರು ಮನೆಯಿಂದಲೂ ಆಕೆ ನಿಷ್ಠುರವಾಗಿದ್ದಾಳೆ. ಆದರೆ ಇದ್ಯಾವುದರ ಗೊಡವೆಗೂ ತಲೆ ಕೆಡಿಸಿಕೊಳ್ಳದೇ ಅವಳನ್ನು ಧಿಕ್ಕರಿಸಿ ಬದುಕಲು ಅವನು ಸಕಲ ಸನ್ನದ್ಧನಾಗಿದ್ದಾನೆ.
ಯಾಕೆ ಹೀಗೆ ಗಂಡಿಗೆ ಸಿಗುವ ಕಾರಣಗಳು, ಹೆಣ್ಣಿಗೆ ಸಿಗುವುದಿಲ್ಲವಾ? ಪ್ರೀತಿಯ ಹೊಸತರಲ್ಲಿ ಅವಳ ಎಲ್ಲ ಚಲನ ವಲನಗಳೂ ಚೆಂದವೆನ್ನುತ್ತಿದ್ದ ಆತನಿಗೆ ಏನಾಗಿದೆ ಈಗ. ಅವಳು ದಕ್ಕುವ ಮುನ್ನ ಮೌನಕ್ಕೂ, ಪಿಸು ಮಾತಿಗೂ ದನಿಯಾಗಿ ನಿಲ್ಲುತ್ತಿದ್ದ ಅವನು ಅದೆಲ್ಲಿ ಮಾಯವಾಗಿಬಿಟ್ಟ. ಎಲ್ಲ ಸುಖ ಸೌಲಭ್ಯಗಳು ಬೇಕು ಎನ್ನುವವ ಅವಳನ್ನು ಪ್ರೀತಿಯಲ್ಲಿ ಯಾಕಾದರೂ ಕೆಡವಿಕೊಳ್ಳಬೇಕಿತ್ತು. ಮದುವೆಯಾಗಬೇಕಿತ್ತು. ಎಲ್ಲ ಆದ ಮೇಲೆ ಹೀಗೆ ಪಶ್ಚಾತ್ತಾಪದ ನಿಟ್ಟುಸಿರು ಬಿಟ್ಟು ಜೀವಮಾನವಿಡೀ ಅವಳನ್ನು ಕಣ್ಣೀರಿನಲ್ಲಿ ಕೈತೊಳೆಸಲು ಅಣಿಗೊಳಿಸಬೇಕಿತ್ತು. ಅಷ್ಟಕ್ಕೂ ಪಶ್ಚಾತ್ತಾಪದ ನಿಟ್ಟುಸಿರು ಅವನಿಗೆ ಮಾತ್ರನಾ?
 ಪ್ರೀತಿಸಿದೆ ಅನ್ನೋ ಒಂದೇ ಕಾರಣಕ್ಕೆ ಎಲ್ಲವನ್ನು ಅನುಸರಿಸಿ ಹೋದ ಅವಳಿಗೆ, ತಾನು ಅಂದಿದ್ದಕ್ಕೆಲ್ಲಾ ತಲೆತಗ್ಗಿಸಿ ಬಾಳ್ವೆ ನಡೆಸಬೇಕು   ಎಂಬ ಕಟ್ಟಳೆ ಹೇರೋದು ಅದೆಷ್ಟು ಸರಿ? ಅವನ ಚುಚ್ಚು ಮಾತುಗಳಿಗೆ ಕಿವಿಗೊಡುತ್ತಾ ಅವನೊಟ್ಟಿಗೆ ಹೆಜ್ಜೆ ಹಾಕಬೇಕು ಎನ್ನುವುದು ಯಾವ ನ್ಯಾಯ? ಇಷ್ಟಕ್ಕೂ ಬಂಧ ಬಿಡಿಸಿಕೊಳ್ಳಲೇಬೇಕು ಅಂತ ಅವಳಿಗೂ ಅನಿಸಿದ್ದರೆ ಹೇಳೋಕೆ ನೆಪಗಳಿಗೇನೂ ಬರವಿತ್ತಾ. ಹೇಳುತ್ತಾ ಹೋದರೆ ಪ್ರತಿ ಗುಕ್ಕಿಗೂ ಒಂದು ಸಕಾರಣ ಹುಡುಕಬಹುದಿತ್ತು. ಅವನು ಧಿಕ್ಕರಿಸುತ್ತಾನಲ್ಲ ಎನ್ನುವ ಅವಸರಕ್ಕೆ ಆಕೆಯೂ ಸ್ವಾಭಿಮಾನವನ್ನು ಮುಂದಿಟ್ಟುಕೊಂಡು ಸಂಬಂಧ ಕಡಿದುಕೊಳ್ಳಲು ಮುಂದಾಗಿದ್ದಳಷ್ಟೇ. ಈಗಲೂ ಅವಳು ಅವನಿಷ್ಟಕ್ಕೆ ಸಿಕ್ಕ ಗಾಳ. ಅವನ ಒಪ್ಪಿಗೆ ಅಂತಿಮ ಠಸ್ಸೆ. ಅವನಿಷ್ಟಕ್ಕೆ ಅವಳು ಸರಿ ಎಂದು ತಲೆಯಾಡಿಸಿದ್ದಾಳೆ. ಆದರೂ ಅವಳ ಮನಸ್ಸಿನ ಮಾರ್ದನಿ ಗುಂಯ್‍ಗುಡುತ್ತಲೇ ಇದೆ. ನೆಪ ಮಾತ್ರಕಷ್ಟೆ ನಿನ್ನ ನೆನಪು ಹೌದು ಒಪ್ಪಿಕೊಳ್ಳುತ್ತೇನೆ. ಈಗಲೂ ಮರೆವನ್ನ ನಾನು ಅದಮ್ಯವಾಗಿ ಪ್ರೀತಿಸುತ್ತೇನೆ.

- ಭಾಚಿ 




No comments:

Post a Comment