Tuesday, 16 May 2017

ಹ್ಯಾಪಿ ಮದರ್ಸ್ ಡೇ ಫಾರ್‌ ಆಲ್ ಲವ್ಲಿ ಅಮ್ಮಾಸ್..

ಎದೆಯೊಳಗಿನ ಮೌನಕ್ಕೂ ದನಿಯಾಗುವ 
ಹೇಳಿದಷ್ಟು ತುಂಬಿ ತೊರೆಯಾಗುವ 
ಬೇಕೆಂದಾಗಲೆಲ್ಲ ಸಿಕ್ಕು ಜತೆಯಾಗುವ 
ಬೇಡೆಂದಾಗ ಬೇಸರಿಸದೆ ಪಕ್ಕವೇ ಸರಿದು ನಿಲ್ಲುವ 
ಹುಡುಕುತ್ತಿದ್ದೇನೆ ಒಬ್ಬ ಗೆಳತಿಯನ್ನ 

ಒಡಲಿನ ರಹಸ್ಯ ಭೇದಿಸದ 
ವದರಿಬಿಟ್ಟ ಗುಟ್ಟುಗಳಿಗೆ ಮುಚ್ಚಿಟ್ಟ ಡೈರಿಯಾಗುವ 
ಬೇಡೆಂದಾಗಲೆಲ್ಲ ಕಾರಣವಿಲ್ಲದೆ ಜಗಳವಾಡಿ
ಬೇಕೆಂದಾಗಲೆಲ್ಲಾ ಮುದ್ದುಮಾಡಿ ಉಪಚರಿಸುವ 
ಹುಡುಕುತ್ತಿದ್ದೇನೆ ಒಬ್ಬ ಗೆಳತಿಯನ್ನ 

ದಣಿದು ಸುಸ್ತಾದಾಗಲೆಲ್ಲ ತಲೆ ಸವರಿ ಹಿತವಾಗಿ ನೀಯುವ 
ಅದೇನೆನೆಲ್ಲ ಮಾತಾಡಿ ಉಳಿದುಬಿಡುವ ಸಣ್ಣ ಪದಕ್ಕೂ ಕಾದು ನಿಲ್ಲುವ 
ಒಂಟಿತನದ ಚಡಪಡಿಕೆಗೆ ಬೋರೆನಿಸದೆ ಜತೆಗಾರಳಾಗಿ ಬಹುದೂರ ಒಯ್ಯುವ 
ಹುಡುಕುತ್ತಿದ್ದೇನೆ ಒಬ್ಬ ಗೆಳತಿಯನ್ನ ..!

ಹೆಗಲಿಗೇರುವ ಪ್ರತಿ ಜವಾಬ್ದಾರಿಯನೂ ತನ್ನದೆಂಬಂತೆ ಬಲು ಮುತುವರ್ಜಿಯಿಂದ ನಿಭಾಯಿಸುವ 
ಎಡವಿ ಬಿದ್ದಾಗಲೆಲ್ಲ ನಗದೆ ಮೇಲೆತ್ತುವ 
ತೊಡರಿ ಹಾದಿ ತಪ್ಪಿದಾಗಲೆಲ್ಲ ಎಳೆದು ಸರಿದಾರಿಗೆ ತಂದುಬಿಡುವ
ಒಳ್ಳೆಯದು ಕೆಟ್ಟದ್ಸು ಚೌಕಟ್ಟಿನಾಚೆಗೂ ಉಳಿದುಬಿಡುವ 
ಹುಡುಕುತ್ತಿದ್ದೇನೆ ಒಬ್ಬ ಗೆಳತಿಯನ್ನ ..!

ಈ ನಡುವೆ ಘಳಿಗೆ ಇದ್ಹಂಗೆ ಇನ್ನೊಂದರೆ ಘಳಿಗೆ ಇರಲ್ಲ, 
ಹು ತುಮುಲಗಳು ಆಳುವ ವಯಸ್ಸಿದು ಬಿಡೆ ಇವೆಲ್ಲ ಸಹಜವೆನ್ನುವ 
ಯಾರ ಹಂಗಿಲ್ಲದೆ ಹೊತ್ತಿನ ನೆಪವಿಲ್ಲದೆ ಪಿಸುದನಿಗಳಿಗೆ ಕಿವಿಯಾಗುವ 
ದೋಷಗಳನು ದೊಡ್ಡದು ಮಾಡದೆ 
ಸಣ್ಣ ಗದರುವಿಕೆ, ದೊಡ್ಡ ಭರವಸೆಯೊಂದಿಗೆ ಬದುಕು ಕಟ್ಟುವ ಕಾಯಕಕ್ಕೆ ಜತೆಯಾಗಿ ನಿಲ್ಲುವ 
ಹುಡುಕುತ್ತಿದ್ದೇನೆ ಒಬ್ಬ ಗೆಳತಿಯನ್ನ..!

ವರ ಪರೀಕ್ಷೆಗೆ ಜತೆಗೆ ನಿಲ್ಲುವ 
ಆಯ್ಕೆಗೆ ಸಲಹೆಯನ್ನಿಕ್ಕುವ 
ಎಲ್ಲದಕ್ಕೂ ಪ್ರಾಮಾಣಿಕಳೆನಿಸುವ 
ಕಪಟವಿಲ್ಲದೆ ಪ್ರೀತಿಯ ನದಿ ಹರಿಸುವ 
ಹಸಿವಿಗೆ ಅನ್ನವಿಕ್ಕುವ, ಬೆತ್ತಲಿಗೆ ಬಟ್ಟೆ ತೊಡಿಸುವ, ಸೋಲಿಗೆ ಧೈರ್ಯ ತುಂಬುವ, ಬದುಕಿನ ಕತ್ತಲೆಗೆ ಅನವರತ ತಾ ಉರಿದು ಬೆಳಕಾಗಿಹ "ಅಮ್ಮ" ವಾಸ್ತವದಲಿ ಎದೆಯಲ್ಲಿ ನಂದಾದೀಪವಾಗಿ ಅಷ್ಟ ದಿಕ್ಕುಗಳಲ್ಲಿ ದೇದೀಪ್ಯಮಾನವಾಗಿ ಬೆಳಗುತ್ತಾ ಪ್ರತಿಷ್ಠಾಪನೆಗೊಂಡಿರುವಾಗ
ನಾನೊಬ್ಬಳು ಹುಚ್ಚಿ ಭ್ರಮೆಯಲ್ಲಿ ಹುಡುಕುತ್ತಲೇ ಇದ್ದೇನೆ 'ಒಬ್ಬ' ಗೆಳತಿಯನ್ನ ....!!! 

ಬದುಕಿನ್ನೆಲ್ಲ ಪಾತ್ರಗಳನು ದಿನಗಳ ಲೆಕ್ಕವಿಲ್ಲದೆ ನಿರ್ವಹಿಸುವ ತಾಕತ್ತುಳ್ಳ ಅಮ್ಮ... ಕ್ಷಮಿಸಿಬಿಡು ನಿನಗೆ ಒಂದು ದಿನಕ್ಕಾದ್ರೂ ವಿಷ್ ಮಾಡಿ ತುಸು ಪಾಪ ಕಳ್ಕೊಳ್ತಿದೀನಿ. ಯಾರೂ ನಿನ್ನ ಮಟ್ಟಕ್ಕೆ ನಿಲ್ಲಲಿಕ್ಕೆ ಸಾಧ್ಯ ಇಲ್ಲ 
ನಿನಗೆ ನಿನ್ನ ದಿನದ ಶುಭಾಶಯ 💐

ಹ್ಯಾಪಿ ಮದರ್ಸ್ ಡೇ ಫಾರ್‌ ಆಲ್ ಲವ್ಲಿ ಅಮ್ಮಾಸ್.. 😘😊

#ಭಾಚಿ

No comments:

Post a Comment