Wednesday, 11 March 2015

 ನಿರ್ಭಯಾ ನಿನಗೇಕೆ ಭಯ..?!



Rape should not be viewed as a deviant sexual act, but as an aggressive and antisocial tool for men’s control over women.
- Brown miller
ನೂರಕ್ಕೆ ನೂರರಷ್ಟು ಹೌದು ಎಂದು ಕಣ್ಣುಮುಚ್ಚಿ ಹೇಳಬಹುದಾದ ಸತ್ಯವಿದು ಅಲ್ಲವಾ..!?
ಅತ್ಯಾಚಾರ- ಒಬ್ಬ ವಿಕೃತ ಮನಸ್ಸಿನ ಪುರುಷ, ಹೆಣ್ಣಿನ ಮೇಲೆ ತನ್ನ ಅಧಿಪತ್ಯ ಸಾಧಿಸುವ ಕಟ್ಟ ಕೊನೆಯ ಹಂತ. ಯಾವುದಕ್ಕೂ ಆ ಹೆಣ್ಣು ಬಗ್ಗಳು ಎಂಬ ಬಳಿಕವಷ್ಟೇ ಆತ ಬಳಸುವ ಕಟ್ಟಕಡೆಯ ಅಸ್ತ್ರ.. ಅದುವೇ ಅತ್ಯಾಚಾರ!  ಆಕೆಯ ದೇಹದ ಮೇಲೆ ಮಾಡಿದ ಹಿಂಸೆಯನ್ನು ತಾನು ಗೆದ್ದೇ ಎಂದು ಬೀಗುವ ಮನಸ್ಥಿತಿ. ಇಂತಹ ಹೀನ ಮನಸ್ಥಿತಿಗೆ ಏನೆನ್ನಬೇಕೋ ಗೊತ್ತಿಲ್ಲ. ಮಾತೆತ್ತಿದರೆ ‘ಅವಳ’ ಬಟ್ಟೆ, ದೇಹದ ಉಬ್ಬು-ತಗ್ಗುಗಳ ಬಗ್ಗೆ ಮಾತನಾಡುವ ಇಂತಹ ಗಂಡಸು ಎಂದು ಕರೆಸಿಕೊಳ್ಳುವ ಕಾಮುಕ ಮನಸ್ಸುಗಳು ಗಂಡು ಎಂಬ ಜನ್ಮಕ್ಕೆ ಅಪಮಾನ. ಅಪ್ಪ, ಅಣ್ಣ-ತಮ್ಮ, ಎಂಬ ಬಾಂಧವ್ಯಗಳ ನಡುವೆ ಬೆಳೆಯುವ ಆ ಹೆಣ್ಣೆಂಬ ಜೀವಕ್ಕೆ ಇಂತಹ ಹೀನ ಮನಸುಗಳ ನೋಟವಾದರೂ ಹೇಗೆ ತಿಳಿದೀತು? ಏನೋ ಟೀನೇಜ್‌ ದಾಟಿರುವ ಹುಡುಗಿಯರಿಗೆ ಆ ಬಗ್ಗೆ ಒಂದು ಸ್ಪಷ್ಟ ಜ್ಞಾನವಾದರೂ ತಿಳಿದಿರುತ್ತೆ. 2 ವರ್ಷ, 3ವರ್ಷದ ಆ ಎಳೆಯ ಕಂದಮ್ಮಗಳಿಗ್ಯಾವ ಅರಿವಿರುತ್ತೆ? ಆ ಮಟ್ಟಿಗೆ ಹೇಳೋದಾದ್ರೆ, ಆ ಹೆಣ್ಣು ಮಗುವಿನ ಹುಟ್ಟಿಗೆ ಕಾರಣವಾಗುವ ಹೆಣ್ಣಿನಷ್ಟೇ ಸಮಾನ ಕಾರಣವಾದ ಗಂಡಿನ ಬಳಿ ಆ ಮಗುವ ಪಾಲನೆ-ಪೋಷಣೆಯಾದ್ರೂ ಹೇಗೆ? ವಿಶ್ವದಲ್ಲೇ ಸುದ್ದಿಯಾದ ಭಾರತದ ನಿರ್ಭಯಾಳ ಅತ್ಯಾಚಾರ ಪ್ರಕರಣ ಘನ-ಘೋರ ಕೃತ್ಯಕ್ಕೆ ಸಾಕ್ಷಿ. ಮಾಡಿದ್ದ ತಪ್ಪಿನ ಸಮರ್ಥನೆಗೆ ಇಡೀ ಗಂಡು ಸಮುದಾಯವೇ ಅವನ ಬೆನ್ನ ಹಿಂದೆ ನಿಂತಂತೆ ವಕೀಲ ಎಂ.ಎಲ್ ಶರ್ಮಾ ಸೇರಿದಂತೆ ಇತರರು ನೀಡುತ್ತಿರುವ ಹೇಳಿಕೆಗಳ ಸುರಿಮಳೆ ಅವರಲ್ಲಿನ ಹೀನ ಮನಸ್ಥಿತಿಗಳಿಗೆ ಹಿಡಿದ ಕೈಗನ್ನಡಿ. ಅಲ್ಲದೇ, ಮುಂದಿನ ಪೀಳಿಗೆಗೆ ಹೆಣ್ಣನ್ನು ಬಗ್ಗು ಬಡಿಯುವುದು ಅತ್ಯಾಚಾರದ ಮೂಲಕ ಎಂಬ ಸಂದೇಶ ನೀಡುತ್ತಿದ್ದಾರೆ. ಮಾತ್ರವಲ್ಲ, ಹೆಣ್ಣಿಗೆ ಇಂತಿಷ್ಟೇ ಪರಿಧಿ ಎನ್ನುವ ಬಲವಂತದ ಬಂಧನ ಹೇರುವಿಕೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಇಲ್ಲಿಯಷ್ಟು ಹೆಣ್ಣನ್ನು ಪೂಜ್ಯ ಭಾವನೆಯಿಂದ ನೋಡುವ ನಿದರ್ಶನ ಜಗತ್ತಿನ ಎಲ್ಲಿಯೂ ಇಲ್ಲ. ಅಂತೆಯೇ ಹೆಣ್ಣನ್ನ ಇಷ್ಟು ತುಚ್ಛವಾಗಿ ನಡೆಸಿಕೊಳ್ಳುವ ನಿದರ್ಶನವೂ ಬೇರೆಲ್ಲಿಯೂ ಇಲ್ಲವೆನಿಸುತ್ತೆ.
       ಹುಡುಗಿ ಬಹಿರ್ದೆಶೆಗೆಂದು ಮನೆಯಿಂದ ಹೊರಬಂದ ಸಮಯದಲ್ಲಿ ಸಾಮೂಹಿಕ ಅತ್ಯಾಚಾರ.. ಪೊಲೀಸ್ ಠಾಣೆಯಲ್ಲೇ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ.. ಸುಮಾರು ಹತ್ತು ಜನರು ಸೇರಿ ಆದಿವಾಸಿ ಮಹಿಳೆ ಮೇಲೆ ಅತ್ಯಾಚಾರ.. ಅಲ್ಲದೇ, ವಿವಸ್ತ್ರಗೊಳಿಸಿ ಪರೇಡ್ ಮಾಡಿಸಿ ಆಕೆಯ ಮಗನ ಎದುರೇ ಮೂತ್ರ ಕುಡಿಯುವಂತೆ ಒತ್ತಡ..
        ನಮ್ಮ ದೇಶದಲ್ಲಿ ದಿನವೊಂದಕ್ಕೆ ಕನಿಷ್ಠ 92 ಅತ್ಯಾಚಾರಗಳು ನಡೆಯುತ್ತಿವೆಯಂತೆ ಇದು ಯಾರೋ ಹೇಳಿರುವ ಮಾಹಿತಿಯಲ್ಲ, ರಾಷ್ಟ್ರೀಯ ಅಪರಾಧ ದಾಖಲಾತಿ ಮಂಡಳಿ(ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ಅಂಕಿ ಅಂಶ. 2012ರಲ್ಲಿ ದೇಶದಲ್ಲಿ 24,923 ಅತ್ಯಾಚಾರ ಪ್ರಕರಣ ದಾಖಲಾಗಿದ್ದರೆ, 2014ರಲ್ಲಿ ಇದು 33,707ಕ್ಕೆ ಹೆಚ್ಚಿದೆ. 15,556 ಪ್ರಕರಣಗಳಲ್ಲಿ ರೇಪ್ ಸಂತ್ರಸ್ತೆಯರು 18ರಿಂದ 30 ವರ್ಷದವರಾಗಿದ್ದಾರೆ ಎಂದು ವರದಿ ಹೇಳಿದೆ.
         ಡಿಸೆಂಬರ್ ೧೬, ೨೦೧೨ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿಯೊಬ್ಬಳ ಮೇಲಿನ ಗ್ಯಾಂಗ್‌ ರೇಪ್‌ ತರುವಾಯ, ಒಂದಾದರೊಂದರಂತೆ ರೇಪ್‌ ಕೇಸ್‌ಗಳು ದಾಖಲಾಗುತ್ತಲೇ ಇದೆ. ಇಲ್ಲಿ ಆಶ್ಚರ್ಯ ಪಡಬೇಕಾದ್ದು ಕೇಸ್‌ಗಳ ದಾಖಲಾತಿಗಲ್ಲ. ಒಂದಕ್ಕೊಂದು ಪ್ರಕರಣಗಳು ಕ್ರೂರತೆಯನ್ನ ತೋರುತ್ತಿರೋದು. ಅತ್ಯಾಚಾರಗೈಯ್ಯುವ ಕಾಮುಕರು ಜಿದ್ದಿಗೆ ಬಿದ್ದಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ಅಥವಾ ಹೆಣ್ಣೊಬ್ಬಳನ್ನು ನೋಡಿದಾಗ ಕಚ್ಚೆ ಕಳಚಿಡುವ ಕಾಮುಕರ ಕುತೂಹಲ ಪರಮಾವಧಿ ತಲುಪಿರಬೇಕು ಎಂಬ ಗುಮಾನಿ ಹುಟ್ಟುತ್ತಿದೆ. ಇಂತಹ ನೀಚ ಮನಸ್ಥಿತಿಗಳಿಗೆ ಏನೆನ್ನುವುದೋ? ನನಗಂತೂ ಈ ಬಗ್ಗೆ ಸಿಕ್ಕ ಸಿಕ್ಕಲ್ಲೆಲ್ಲಾ ಕೇಳಿ ತಿಳಿಯುತ್ತಾ, ಇಂತಹ ಹೀನ ಮನಸ್ಥಿತಿಗಳಿಗೆ ಮರುಕ ಹುಟ್ಟುತ್ತಿದೆ. ಇಂತಹವರಿಗೆ ಚಿಕಿತ್ಸೆ, ಹೆಣ್ಣು ನಿಮ್ಮಂತೆಯೇ ಸಾಮಾನ್ಯ ದೇಹಸ್ಥಿತಿಯುಳ್ಳವಳು ಎಂಬ ಜ್ಞಾನವನ್ನು ಕೂರಿಸಿಕೊಂಡು ತಲೆಗೆ ತುಂಬಬೇಕೆನಿಸುತ್ತೆ. ಸದ್ಯ ಇದೇ ಮನಸ್ಥಿತಿಗಳ ಅಧ್ಯಯನ ಪುಸ್ತಕ ಬರೆಯಲು ಪ್ರೇರಣೆ ನೀಡಿರುವುದು ಇನ್ನಷ್ಟು ಅಧ್ಯಯನಕ್ಕೆ ನಾಂದಿ ಹಾಡಿದೆ. ಎಲ್ಲದಕ್ಕೂ ಅಂತ್ಯ ಎನ್ನುವುದಿದೆ. ಇಂತಹ ಕೃತ್ಯಗಳ ಫುಲ್‌ ಸ್ಟಾಪ್‌ಗೆ ನಮ್ಮಂತಹ ಮನಸ್ಥಿತಿಗಳು ಮುನ್ನುಡಿ ಬರೆಯಬೇಕಷ್ಟೇ. ಮತ್ತದೇ ವಿಕೃತ ಗ್ಯಾಂಗ್‌ ರೇಪ್‌ಗೆ ಹೆಣ್ಣೊಬ್ಬಳು ಬಲಿಯಾಗುವ ಮುನ್ನ ಎಲ್ಲರೂ ಹೆಣ್ಣು-ಗಂಡಿನ ಪರಿಧಿ ಮೀರಬೇಕಿದೆ. ನಿರ್ಭಯಳಿಗೆ ಅಭಯ ನೀಡಬೇಕಿದೆ.
        ಕೊನೆಯದಾಗಿ ಹೆಣ್ಣು-ಗಂಡು ಇಬ್ಬರೂ ಸಮಾಜದ ಕಣ್ಣುಗಳು.. ಅವರಿಬ್ಬರೂ ಸಮನಾಗಿದ್ದರೆ ಮಾತ್ರ ಸಮಾಜ-ಸಮೂಹ....! ಇದನ್ನು ಅರಿತುಕೊಂಡವರಷ್ಟೇ ನಾಗರಿಕರು.. ಹೌದಲ್ಲವಾ..?!



Saturday, 28 February 2015

ಜೀವನ ಕ್ಷಣ ಕ್ಷಣಕ್ಕೂ ಪಾಠ ಕಲಿಸುತ್ತೆ.. ಆದ್ರೆ ನಾವು ಅದನ್ನ ಸರಿಯಾಗಿ ಅರಿಯೋದಿಲ್ಲ ಅಷ್ಟೇ. ತಿಳಿದೇ ಮುಂದೇ ಹೋಗಿ ಎಡವಿ ಬೀಳೋದೇ ಜಾಸ್ತಿ. ಬಿದ್ದ ಮೇಲೂ ಗಮನಕ್ಕೆ ಬರ್ದಿದ್ರೆ ನಮ್ಮಂತಹ ಮುಠ್ಠಾಳರು ಮತ್ತೊಬ್ಬರು ಇರೋದಿಲ್ಲ. ಕೆಲವು ಬಾರಿಯಂತೂ ನಮ್ಮದಲ್ಲದ ತಪ್ಪಿಗೆ ನಾವು ನಮ್ಮನ್ನೇ ತಕ್ಕಡಿಯಲ್ಲಿ ಹಾಕಿ ತೂಗೋ ಹಾಗೇ ಮಾಡೋ ಮಂದಿ, ನಾವು ಬಿದ್ರೆ ನಗಾಡ್ತೆ ಇರೋಲ್ಲ. ಆಳಿಗೊಂದು ಕಲ್ಲು ಅನ್ನೋ ಹಂಗೆ ಸಿಕ್ಕ ಸಿಕ್ಕವರೆಲ್ಲಾ ಜಾಡ್ಸೋ ಕಾರ್ಯ ಚೆನ್ನಾಗಿಯೇ ಮಾಡ್ತಾರೆ.. ಅದ್ಕೆಲ್ಲಾ ಕೇರ್‌ ಮಾಡೋ ಜೀವ ಅಲ್ಲ ಇದು.. ಕೆಲವರು ಬಿಡಿ ಬಿದ್ರೂ ಮೀಸೆ ಮಣ್ಣಾಗ್ಲಿಲ್ಲ ಅನ್ನೋ ಕೆಟಾಗರಿಗೇ ಸೇರ್ದವ್ರು.
ಅಂತಹದ್ದೇ ಮೊಂಡುತನ ನನ್ನಲ್ಲೂ ಇದೆ. ಇಲ್ಲಂತ ಅಲ್ಲ. ಆದ್ರೆ, ಯಾರೇ ಆಗ್ಲಿ ಎದುರಿಗೇ ನಿಲ್ಲೋರ್‌ ಜೊತೆ ಗುದ್ದಾಡಿ ಗೆಲ್ಬೋದು.. ಬೆನ್ನ ಹಿಂದೆ ನಿಂತು ಅಪಪ್ರಚಾರ ಮಾಡ್ತಾ ಓಡಾಡೋರಿಗೆ ನಿಜಕ್ಕೂ ನಾವು ಏನೂ ಮಾಡ್ಲಿಕ್ಕಾಗಲ್ಲ. ಅಷ್ಟಕ್ಕೂ ನಮ್ಮ ಬಗ್ಗೆ ಅದ್ಯಾಕೇ ಅವ್ರಿಗೇ ಅಷ್ಟೆಲ್ಲಾ Concern ಗೊತ್ತಿಲ್ಲ. ಆದ್ರೂ, ಒಂಥರಾ ಖುಷಿ ನನ್ನಂತವರಿಗೆ.. ಯಾಕೆಂದ್ರೆ, ನಮ್ಮ ಪ್ರತಿ ಚಲನ-ವಲನಗಳನ್ನೂ ಸೂಕ್ಷ್ಮವಾಗಿ ತಿಳಿಯೋ ಅವರು ಅವರಿಗೆ ಗೊತ್ತಿಲ್ಲದಂಗೆ ನಮ್ಮ ಪರ್ಸನಲ್‌ ಪಿಎಗಳಾಗಿ ಬಿಟ್ಟಿರ್ತಾರೆ.(ಸಂಬಳ ಗಿಂಬಳ ಎರಡೂ ಇಲ್ದಂಗೆ) ಇರ್ಲಿ ಬಿಡಿ ಅವ್ರ ಖುಷಿ.. ಅನುಭವಿಸ್ಕೋಳ್ಳಿ.. ನಮ್ ಗತ್ತು ಏನೂ ಕಮ್ಮಿ ಆಗಲ್ಲ. ಹಾಗಂತ ದುರಹಂಕಾರದ ಮಾತಲ್ಲ ಕಂಡ್ರಿ. ಸ್ವಾಭಿಮಾನದ ಮಾತು ಹೆಮ್ಮೆಯಿಂದ್ಲೇ ಹೇಳ್ಬೇಕು ಅನ್ಸತ್ತೆ
ಮೂರನೇ ವ್ಯಕ್ತಿಗಳು ಹುಟ್ಟಿಕೊಂಡಾಗ್ಲೆ ನಮ್ ಬೆಲೆ ಏನೂ ಅಂತ ನಮಿಗ್‌ ತಿಳಿಯೋದು. ಅದ್ರೆ ಅದ್ನ ಕಂಡು ಕೊರಗೋ ಮನಸ್ಥಿತಿ ಇಲ್ಲದಿದ್ರೆ ಎಲ್ಲವೂ ಸೌಖ್ಯ,.. ಎಲ್ಲವೂ ಕ್ಷೇಮ.. ಸೂಕ್ಷ್ಮ ಮನಸ್ಸಿನವ್ರು ಏನಾದ್ರೂ ಆಗ್ಬಿಟ್ರೆ ಕಥೆ ಮುಗೀತು. ಅಲ್ಲಿ ಒಂದು ಪುಟ್ಟ ಜೀವ ತನ್ನ ಹಂಗನ್ನೇ ತೊರೆಯೋ ಮಟ್ಟಿಗೆ ಅಲ್ಲಿ ಪರಿಸ್ತಿತಿ ಕೈಮೀರಿಬಿಡುತ್ತೆ. ಅವರ ಮಾತುಗಳು ಆ ಮಟ್ಟಕ್ಕೆ ಇರ್ತವೆ.
ಏನೋ ನಾವೊಂಚುರು ಮೊಂಡು ಬಿದ್ದಿರೋದ್ಕೆ ಹೆಂಗೋ ಮ್ಯಾನೇಜ್‌ ಆಗ್ತಿದೆ ಜೀವ..

ನೀತಿ: ಎಲ್ರೂ ಎಲ್ಲಾ ಕಾಲದಲ್ಲೂ ಒಂದೇ ತರ ಇರೋಲ್ಲ.. ಬಿಟ್ಬಿಡಿ ಬದುಕ್ಕೊಳ್ಳಿ.. ನಿಮ್ಹನ್ನ ಏನೂ ಅವ್ರು ಕಿತ್ಕೋಳ್ಳಲ್ಲ.. ಯಾಕಂದ್ರೆ ನಿಮ್ಮಂತ ಬುದ್ದಿ ಅವರಿಗಿಲ್ಲ ಅದಂತೂ ದಿಟ!

Friday, 6 February 2015

ಪತ್ರಿಕೋದ್ಯಮಕ್ಕೂ ಬರುವ ಮುನ್ನ ಒಂದು ಅದಮ್ಯ ಆಸೆಯನ್ನು ಮನದಲ್ಲಿ  ನೆಟ್ಟುಕೊಂಡೇ ಬಂದವಳು ನಾನು. ಆದರೆ ಆಗಿದ್ದೇ ಒಂದು, ಆಗ್ತಿರೋದೇ ಮತ್ತೊಂದು.. ಆದ್ರೂ ಒಬ್ಬ ಅಂಕಣಗಾರ್ತಿ ಆಗಬೇಕೆಂಬ ಚಿಗುರು ಇನ್ನೂ ಎಳಸಲ್ಲೇ ನೀರುಣ್ಣುತ್ತಿದೆ. ಇನ್ನೂ ಬಲಿಯುವ ಭರದಲ್ಲೇ ನನ್ನನ್ನು ನಾನು ಸಕ್ರಿಯವಾಗಿ ಪತ್ರಿಕೋದ್ಯಮದಲ್ಲಿ ಉಳಿಸಿಕೊಂಡಿದ್ದೇನೆ. ಅದಕ್ಕೇ ಕಾರಣವೂ ಇದೆ.. ಪತ್ರಿಕೋದ್ಯಮಕ್ಕೂ ಬರುವ ಮುಂಚೆ ಪ್ರತಾಪಸಿಂಹ, ವಿಶ್ವೇಶ್ವರ ಭಟ್, ಜಿ.ಎನ್.ಮೋಹನ್‌, ಪಿ.ತ್ಯಾಗರಾಜ್, ರಾಧಾಕೃಷ್ಣ ಭಡ್ತಿ, ಮಣಿಕಾಂತ್ ರಂತಹವರ ಅಂಕಣಗಳನ್ನು ಓದುತ್ತಾ ಬೆಳೆದವಳು ನಾನು. ಅವರ ಪ್ರಭಾವದಿಂದಲೇ ಈ ದಿನ ನಾನಿಲ್ಲಿ.. ಅವರ ಆಧಿಕ್ಯದಿಂದಲೇ ಸಾಕಷ್ಟು ಹುಚ್ಚಾಗಿದ್ದಿದೆ, ನಿದ್ದೆ ಬಿಟ್ಟು ಪ್ರತಾಪ್‌ಸಿಂಹ  ಪುಸ್ತಕಗಳನ್ನು ಓದಿದ್ದ ದಿನಗಳು ಇಂದು ‘ಆ ದಿನಗಳು’ ಅಂತ ಹೇಳೋ ನೆನಪುಗಳು.. ಈ ಹುಚ್ಚಾಟದಿಂದಲೇ ನನ್ನ ರಾಜಾವೇಶಕ್ಕೆ, ಆ ಆ್ಯಟಿಟ್ಯೂಡ್‌ ಮೈಂಡ್‌ನಿಂದ ಕೆಲ ಅನಾಹುತಗಳನ್ನು ಮಾಡಿದ್ದೂ ಉಂಟು. ಅದ್ಕೇ ಏನೋ ನನ್ ಕುಟುಂಬದಲ್ಲಿ ನಾನು ಪೇಪರ್ ಆಯೋಳು ಅಂತ್ಲೇ ಫೇಮಸ್ಸು. ಅದ್ಕೆ ಅಮ್ಮ ಹೀಗ್ಲೂ ಕಾಲೆಳಿತಿರ್ತಾಳೆ. ಆದ್ರೂ ಪೇಪರ್‌ ಆಯೋದ್ನ  ಬಿಡೋ ಮನಸ್ಸಿಲ್ದೇ ಬಿಟ್ಟೇ. (ಬಿಟ್ಟಿದ್ದು ಈಗ ಗತಿಸಿ ಹೋದ ಕಾಲ) ಆದ್ರೆ ಅದು ಮಾತ್ರ ನನ್ ಬಿಟ್ಟಿಲ್ಲ.. ಅದೂ ಕೂಡ ನನ್ ಸುತ್ಲೇ ಸುತ್ತಾತ್ತಾ ಇದೆ. ಭಾರ ಇಲ್ಲ ನೋಡಿ..!, ಎಲ್ಲಾ ಒಟ್ಟಾಗಿ ತೂಕ ಆಗಿ ಕೈಗೆ ಸೇರಿದ್‌ ಮೇಲೆ ಮತ್ತೆ ರಿಟರ್ನ್ಡ್ ಟು ಪೇಪರ್.. ಆದ್ರೆ  ಈಗ ಕ್ಯಾಮೆರಾಗಳ ಸುತ್ತಮುತ್ತ ನನ್ ವರ್ಕು. ಆದ್ರೆ, ಕ್ಯಾಮೆರಾ ಕಣ್ಣನ್ನ ನಾ ಇಣುಕಿಯೂ ನೋಡಿಲ್ಲ. ನೋಡೋ ಆಸೆ ಇಲ್ಲ ಅಂತಲ್ಲ. ಅದ್ಕೆ ತಕ್ಕ ಸಿದ್ಧತೆ ಬೇಕ್ರಿ, ಇಲ್ದಿದ್ರೆ ಮೂವರೊಳಗೆ ಒಬ್ಬಳಾಗಿ ಉಳಿದುಬಿಡ್ತೀನೇನೋ ಅನ್ನೋ ಭಯದಲ್ಲೇ ನಾನಿನ್ನೂ ದೂರನೇ ಇದೀನಿ. ಸಿಕ್ಕ ಎಲ್ಲಾ ಆಫರ್‌ಗಳನ್ನು ಕೆಲವೊಂದಿಷ್ಟು ಕಾರಣಗಳಿಗೆ ಬದಿಗೊತ್ತಿ ಕೂತಿದ್ದೇನೆ. ಕೂರೋದಕ್ಕೆ ಕೆಲವು ಸಕಾರ, ನಕಾರ ಕಾರಣಗಳು ಇಲ್ದೇ ಏನಿಲ್ಲ. ಏನೇ ಆಗಬೇಕಿದ್ರೂ ಒಳ್ಳೆಯದ್ದು, ಕೆಟ್ಟದ್ದು ಬೆನ್ನ ಹಿಂದಿಂದೆಯೇ ಒದ್ದುಕೊಂಡು ಬರುತ್ರೀ. ಅದಕ್ ನಾ ಕೂಡ ಹೊರತಾಗಿಲ್ಲ. ಆಗೋದು ಇಲ್ಲ ಬಿಡಿ.. ಆಗೋಕು ಮುಂಚೆ ಒಂದಿಷ್ಟು ಪೀಠಿಕೆ ಅಷ್ಟೇ ಇದು.. ಯಾಕೋ ಅಂದುಕೊಂಡದ್ದು ಆಗಬೇಕಂದ್ರೆ ಸಾಕಷ್ಟು ಗ್ರೌಂಡ್‌ವರ್ಕ್‌ ಮಾಡ್ಬೇಕು ಅನ್ನೋ ಹುಳು ತಲೆ ಹೊಕ್ಕಿದೆ. ಸದ್ಯಕ್ಕೆ ಅದೇ ತಲೆಬಿಸೀಲೇ ಮುಂದುವರಿದ ಭಾಗವನ್ನ ಮುಂದುವರಿಸೋದೋ, ನಿಲ್ಸೋದೋ  ಯೋಚ್ನೆಯಲ್ಲಿದ್ದೇನೆ.. ಆಗಿದ್ ಆಗ್ಲಿ ಈ ಹುಚ್ಚಾಟ ಇನ್ನೂ ಅದೆಷ್ಟ್ ದಿನವೋ ಕಾದು ನೋಡೋಣ.. ಹೇಳೋದ್‌ ಇನ್ನೂ ಮುಗೀಲಿಲ್ಲ... ಮನಸ್ಯಾಕೋ ಇಂದು ಭಾರವಾಗಯ್ತೇ ಏನೋ ಹೇಳ್ಬೇಕು ಅಂತ ಟೈಪಿಸೋಕ್ ಶುರು ಮಾಡ್ದೆ, ಆದ್ರೆ ಹೇಳ್ಬೇಕು ಅನ್ನೋದೇ ಮರೆತೋಯ್ತು ಅದ್ಕೆ ಬೇರೇನೋ ಹೇಳಿದೀನಿ ಅಡ್ಜೆಸ್ಟ್‌ ಮಾಡ್ಕಳಿ ಪ್ಲೀಸ್‌..

Thursday, 29 January 2015

ಋತುಮಾನದ ಮೌನ ಸಾಕು
ಸದ್ದಾಗಿಬಿಡು ಮನದ ಮಾತಿಗೆ
ಅಗಲಿಕೆಯ ನೋವು, ನಿಟ್ಟುಸಿರ ಕಾವು
ಬೇಗುದಿಯ ಭಾವ  ದುಸ್ತರವೀ ಬದುಕಿಗೆ..!!

ಒಲವ ಹೊಳೆ ಹರಿಸಿದ
ನಿನ್ನ ಕಣ್ಣೊಳಗೆ ಬಚ್ಚಿಟ್ಟು ಹುದುಗಬೇಕಿದೆ
ಯಾರಿಗೂ ಕಾಣದಂತೆ, ಬೇರಾರೂ ನೋಡದಂತೆ
ಅಲ್ಲೇ ಸಂಚರಿಸಬೇಕಿದೆ
ನಿನಗೂ ತಿಳಿಯದಂತೆ, ನಿನ್ನೊಳಕ್ಕೆ ಇಳಿಯದಂತೆ..!!

ಕಲ್ಪನೆಗಳು ಸಾಕಾಗಿದೆ,
ವಾಸ್ತವವ ಅರಿಯಬೇಕಿದೆ
ನಿನ್ನ  ಇನ್ನಂತೂ ಸೇರಬೇಕಿದೆ
ಕಡಲ ಅಲೆಗಳು ಅಪ್ಪುವಂತೆ
ಅಲ್ಲೇ ನೆಲೆ ಹೂಡಬೇಕಿದೆ
ಮತ್ಸ್ಯಕ್ಕೂ ತಿಳಿಯದಂತೆ, ಅಂಬಿಗನಿಗೂ ಮುಟ್ಟದಂತೆ..!!

ಹುಟ್ಟು-ಸಾವಿಗೆ ಅರ್ಥ ತಂದಿರುವೆ
ಬದುಕು ಚಿಂತೆಗಳ ಸಂತೆ
ಅಲ್ಲಿ ನಾನಿಲ್ಲ, ಅಲ್ಲಿ ನೀನೂ ಇಲ್ಲ
ಇಬ್ಬರೂ ಸೇರಿ ಸೌಧ ನಿರ್ಮಿಸಬೇಕಿದೆ
ಯಾರೂ ಕೆಡುಹದಂತೆ, ಮತ್ಯಾರೂ ಒಳಬಾರದಂತೆ..!!

- ಭಾಚಿ

Thursday, 1 January 2015

‘ಅಂತರಂಗದ ಕನ್ನಡಿ’



ಅದ್ಯಾಕೋ ಅಂತರಂಗದ
ಕನ್ನಡಿ ಎನ್ನ ನೋಡಿ ನಗುತ್ತಿದೆ
ಕ್ಷಣದಲ್ಲೇ ಬದಲಾಗುವ
ಹೆಣ್ಮನವ ಕಂಡು
ಮುಸಿಮುಸಿ ನಗುತ್ತಿದೆ
ಅಂತರಾಳದ ನೋವುಗಳ
ಕಂಡು ಗಹಗಹಿಸಿ
ನಗುತ್ತಿದೆ
ನೋವುಗಳು ಇನ್ನಿಲ್ಲದ
ಸಂಭ್ರಮಾಚರಣೆಯಲ್ಲಿ
ತೊಡಗಿವೆ
ಅದ್ಯಾವಾವುದೋ
ಕಾಣದ ಕೈಗಳು
ಹಿಡಿದಿಡಿದು ಜಗ್ಗುತ್ತಿವೆ
ಮನದ ಮಂಪರನು
ಸರಿಸಲು ಹರಸಾಹಸ
ಪಡುತ್ತಿವೆ
ಶ್........
ದಿಗ್ಬ್ರಮೆಗಳಿಗೆ ದಿಗ್ಬಂಧನ
ಹಾಕುವ ಹೊತ್ತು!!!!!!!

- ಭಾಚಿ